

ಮಂಗಳೂರು: ನಗರದ ಹಂಪನಕಟ್ಟೆ ಬಳಿ ಇರುವ ಯುನಿಸೆಕ್ಸ್ ಸೆಲೂನ್‌ನಲ್ಲಿ ಅದರ ಮಾಲಕಿ ತನ್ನ ಮೇಲೆ ಹಲ್ಲೆ ನಡೆಸಿ, ಅರೆ ಬೆತ್ತಲೆ ಫೋಟೋ ತೆಗೆದು ಬೆದರಿಕೆಯೊಡ್ಡಿದ್ದಾರೆ ಎಂದು ಅಲ್ಲಿ ಬ್ಯುಟೀಷಿಯನ್ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತಾನು ಒಂದೂವರೆ ತಿಂಗಳಿನಿಂದ ಬ್ಯುಟೀಷಿಯನ್ ಆಗಿ ಅಲ್ಲಿ ಕೆಲಸ ಮಾಡಿಕೊಂಡಿದ್ದೇನೆ. ಕೆಲಸಕ್ಕೆ ಸೇರುವ ಸಂದರ್ಭ ಆ ಬ್ಯೂಟಿಪಾರ್ಲರ್‌ನ ಮಾಲೀಕರು, ಬರುವ ಗ್ರಾಹಕರೊಂದಿಗೆ ಆತ್ಮೀಯವಾಗಿದ್ದುಕೊಂಡು ಅವರು ಬಯಸುವ ಸೇವೆಯನ್ನು ಒದಗಿಸುವಂತೆ ಮತ್ತು ಅವರಿಂದ 500ರೂ.ನಿಂದ 1000 ರೂ.ವರೆಗೆ ಸೇವಾ ಭತ್ತೆಯಾಗಿ ಪಡೆಯಲು ಅವಕಾಶ ನೀಡಿದ್ದರು. ಕಳೆದ ಸೋಮವಾರ ಪರಿಚಯದ ಪುರುಷ ಗ್ರಾಹಕರೊಬ್ಬರು ಬಂದು ಮಸಾಜ್ ಮಾಡಿಸಿಕೊಂಡ ಸಂದರ್ಭ ಮಾತನಾಡಿದ್ದನ್ನು ವಾಯ್ಸ ರೆಕಾರ್ಡ್ ಮಾಡಿಕೊಂಡು ಮಾಲೀಕರಿಗೆ ನೀಡಿದ್ದಾರೆ. ಆ ಸಂದರ್ಭ ಪಾರ್ಲರ್‌ನ ಮಾಲೀಕರ ಪತ್ನಿ ಬಂದು ನನಗೆ ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ ನನ್ನ ಅರೆಬೆತ್ತಲೆ ಫೋಟೋ ತೆಗೆದು ಬೆದರಿಕೆಯೊಡ್ಡಿದರು. ಮರುದಿನ ನನ್ನ ಪತಿಯನ್ನು ಕರೆಸಿ ಫೋಟೋ ತೋರಿಸಿ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ. ಮೂರು ವರ್ಷದ ಮಗುವನ್ನೂ ಹೊಂದಿರುವ ನಾನು ಈ ಬಗ್ಗೆ ನೊಂದು ಆತ್ಮಹತ್ಯೆಗೂ ಮುಂದಾಗಿದ್ದೆ. ಆ ಸಂದರ್ಭ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಅವರನ್ನು ಸಂಪರ್ಕಿಸಿ ನಡೆದ ವಿಚಾರ ತಿಳಿಸಿದ್ದು, ಬಂದರು ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದು ಮಹಿಳೆ ಕಣ್ಣೀರು ಹಾಕಿದರು.
ಅಲ್ಲಿ ಕೆಲಸ ಮಾಡುವ ಇತರ ಯುವತಿ, ಯುವಕರ ಮೇಲೂ ಇಂತಹ ಹಲ್ಲೆ, ಬೆದರಿಕೆ ನೀಡುವ ಕಾರ್ಯ ನಡೆಯುತ್ತಿದೆ. ಆದರೆ ಮರ್ಯಾದೆ ಹಾಗೂ ಉದ್ಯೋಗ ಕಳೆದುಕೊಳ್ಳುವ ಭಯದಿಂದ ಯಾರೂ ಮಾತನಾಡುವುದಿಲ್ಲ. ನಾನು ಮಾನಸಿಕವಾಗಿ ನೊಂದಿದ್ದೇನೆ. ಈ ರೀತಿಯ ಪರಿಸ್ಥಿತಿಯ ಯಾವ ಮಹಿಳೆಗೂ ಬರಬಾರದು ಎಂದು ಆಕೆ ಹೇಳಿದರು.
‘ಬ್ಯೂಟಿಪಾರ್ಲರ್ ಹೆಸರಿನಲ್ಲಿ ಈ ಬ್ಯೂಟಿಪಾರ್ಲರ್‌ನಲ್ಲಿ ಮಸಾಜ್ ದಂಧೆ ನಡೆಸಲಾಗುತ್ತಿರುವುದು ಸಂತ್ರಸ್ತೆ ಮಹಿಳೆಯ ಹೇಳಿಕೆಯಿಂದ ವ್ಯಕ್ತವಾಗಿದೆ. ಹೊಟ್ಟೆಪಾಡಿಗೆ ಕೆಲಸಕ್ಕೆ ಬರುವ ಮಹಿಳೆ ಹಾಗೂ ಯುವತಿಯರಿಗೆ ಬೆದರಿಕೆಯ ಮೂಲಕ ಮಸಾಜ್ ದಂಧೆ ನಡೆಸಲಾಗುತ್ತಿದೆ. ಈ ಬಗ್ಗೆ ಪೊಲೀಸ್ ಆಯುಕ್ತರ ಗಮನಕ್ಕೆ ತಂದು ಬಂದರು ಠಾಣೆಗೆ ದೂರು ನೀಡಲಾಗಿದೆ’ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಹೇಳಿದರು.