

ತಿ.ನರಸೀಪುರ: ಬಿಜೆಪಿ ಸೇರಿದಂತೆ ಕೋಮುವಾದಿ ಪಕ್ಷಗಳು ದೇಶದಲ್ಲಿ ಅಧಿಕಾರ ನಡೆಸಲು ಆಯೋಗದ ಮೂಲಕ ನಡೆಸುತ್ತಿರುವ ಮತಗಳ್ಳತನ ನಿಲ್ಲಬೇಕು. ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ, ಪಾರದರ್ಶಕವಾಗಿ ಚುನಾವಣೆಗಳನ್ನು ನಡೆಸಬೇಕೆಂಬ ಉದ್ದೇಶದಿಂದ ಜನಜಾಗೃತಿ ಮೂಡಿಸಲು ಕಾಂಗ್ರೆಸ್ ದೇಶದಾದ್ಯಂತ ವೋಟ್ ಚೋರಿ ಸಹಿ ಸಂಗ್ರಹ ಅಭಿಯಾನ ನಡೆಸುತ್ತಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಜಂಕ್ಷನ್‌ನಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ವೋಟ್ ಚೋರಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಮತಗಳವು ಮುಂದುವರಿದಲ್ಲಿ ಪ್ರಜಾಪ್ರಭುತ್ವ ಇರಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟು, ಸಾರ್ವತ್ರಿಕ ಚುನಾವಣೆಗಳಲ್ಲಿ ಪ್ರಜಾಪ್ರಭುತ್ವ ಗೆಲ್ಲಬೇಕು, ಉಳಿಯಬೇಕು ಹಾಗೂ ಆಳ್ವಿಕೆ ನಡೆಸಬೇಕು ಎಂಬ ಸಂದೇಶವನ್ನು ರಾಷ್ಟ್ರದಾದ್ಯಂತ ನೀಡಲು ಕಾಂಗ್ರೆಸ್ ಜನಂದೋಲನ ಆರಂಭಿಸಿದೆ ಎಂದರು.
ಮತಗಳ್ಳತನದ ಮೂಲಕ ಜನಾದೇಶ ಕಗ್ಗೊಲೆಯಾಗುತ್ತಿದೆ. ಇಂತಹ ಕೃತ್ಯದ ವಿರುದ್ಧ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಜನಜಾಗೃತಿಯ ಚಳವಳಿ ನಡೆಸುತ್ತಿದ್ದಾರೆ. ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಯಾಗಿರುವ ಚುನಾವಣಾ ಆಯೋಗವನ್ನು ಪ್ರತಿಯೊಬ್ಬ ಮತದಾರರು ತಮ್ಮ ಮತದ ಹಕ್ಕನ್ನು ಕದಿಯಲು, ಕಸಿಯಲು ಅವಕಾಶ ನೀಡದಂತೆ ಎಚ್ಚರಿಸಬೇಕು. ಸರ್ವಾಧಿಕಾರಿ ಧೋರಣೆಯುಳ್ಳವರ ಕೈಗೆ ಅಧಿಕಾರ ಕೊಟ್ಟರೆ ಜನರ ಹಕ್ಕು ಮತ್ತು ವಾಕ್ ಸ್ವಾತಂತ್ರ್ಯದ ಹರಣವಾಗುತ್ತದೆ ಎಂದು ಎಚ್ಚರಿಸಿದರು.
ವಿಪಕ್ಷಗಳನ್ನು ಬೆಂಬಲಿಸುವ ಮತದಾರರನ್ನು ಆಡಳಿತ ಪಕ್ಷವಾಗಿ ಬಿಜೆಪಿ ಮತದಾರರ ಪಟ್ಟಿಯಿಂದಲೇ ಕಿತ್ತೆಸೆದು ಮತದಾರರಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ಬಿಹಾರ ರಾಜ್ಯಗಳಲ್ಲಿ ವೋಟ್ ಚೌರಿ ಆಗಿರುವುದನ್ನ ಖಚಿತ ಪಡಿಸಿಕೊಂಡು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಜೀವದ ಹಂಗನ್ನು ತೊರೆದು ಹೋರಾಟ ನಡೆಸುತ್ತಿದ್ದಾರೆ. ಚುನಾವಣೆ ವೇಳೆ ಸುಳಿವು ಕೊಟ್ಟ ಕೂಡಲೇ ದಾಳಿ ಮಾಡುವ ಚುನಾವಣಾ ಆಯೋಗ ಮತಗಳವು ಬಗ್ಗೆ ರಾಹುಲ್ ಗಾಂಧಿ ಅವರನ್ನು ದಾಖಲೆ ಕೇಳುತ್ತಿದೆ. ಚುನಾವಣೆ ಅಕ್ರಮ, ಮತಗಳವು ತಡೆಗಟ್ಟಬೇಕಾದದ್ದು ಆಯೋಗದ ಸಾಂವಿಧಾನಿಕವಾದ ಕರ್ತವ್ಯ, ಜವಾಬ್ದಾರಿಯಾಗಿದೆ ಎಂಬುದನ್ನು ಆಯೋಗ ಅರಿಯಬೇಕೆಂದು ಡಾ.ಎಚ್.ಸಿ.ಮಹದೇವಪ್ಪ ಸಲಹೆ ನೀಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿ, ಎಐಸಿಸಿ ದೇಶದಾದ್ಯಂತ ಆಯೋಜಿಸಿರುವ ವೋಟ್ ಚೋರಿ ಅಭಿಯಾನದಲ್ಲಿ ಮತದಾರರ ಹಕ್ಕುಗಳಿಗಾಗಿ ಸಹಿ ಸಂಗ್ರಹಣೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಮತಗಳ್ಳತನ ನಿಲ್ಲಿಸಿ, ಜನಾದೇಶ ಕಗ್ಗೊಲೆ ಆಗುವುದನ್ನು ತಪ್ಪಿಸಲು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅದಕ್ಕಾಗಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ 20 ಸಾವಿರ ಸಹಿಗಳನ್ನು ಪಡೆಯಲಾಗುವುತ್ತಿದೆ. ಅಭಿಯಾನವನ್ನು ಯಶಸ್ವಿಗೊಳಿಸಲು ಪಕ್ಷದ ಕಾರ್ಯಕರ್ತರು ಸೇರಿದಂತೆ ಮುಖಂಡರು ಹಾಗೂ ನಾಯಕರು ಚುರುಕಿನಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಜಿ.ಪಂ. ಮಾಜಿ ಸದಸ್ಯರಾದ ಎಂ.ಸುಧಾ ಮಹದೇವಯ್ಯ, ಹೊನ್ನನಾಯಕ, ಸೋಸಲೆ ಮಹದೇವಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಡಿ. ಬಸವರಾಜು, ಬಿ.ಚನ್ನಕೇಶವ, ಮೈಮುಲ್ ನಿರ್ದೇಶಕ ಆರ್. ಚಲುವರಾಜು,ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ. ವಜ್ರೇಗೌಡ, ಎಂ.ಎಸ್. ಶಿವಮೂರ್ತಿ, ಪಿ ಎ ಸಿ ಸಿ ಬ್ಯಾಂಕ್ ಅಧ್ಯಕ್ಷ ವೈ.ಎನ್. ಶಂಕರೇಗೌಡ, ಸಹಾಯಕ ಪ್ರಾಧ್ಯಾಪಕ ಡಾ. ಬಿ.ಕೆ.ಜ್ಞಾನಪ್ರಕಾಶ್, ಲತಾ ಜಗದೀಶ್, ಮತ್ತಿತರರು ಇದ್ದರು.
ಅಧಿಕಾರ ನೀಡಿದ ಮತದಾರರಿಗೆ ಹೋಬಳಿ ಮಟ್ಟದಲ್ಲಿ ಈಗಾಗಲೇ ಸಮಾರಂಭ ಆಯೋಜಿಸಿ ಕೃತಜ್ಞತೆಗಳನ್ನು ಸಲ್ಲಿಸಿದ್ದೇವೆ. ಮುಂದಿನ ದಿನಗಳಲ್ಲಿ ಈ ಹಿಂದೆ ಹೇಳಿದಂತೆ ಗ್ರಾ.ಪಂ. ಮಟ್ಟದಲ್ಲಿ ಸುನೀಲ್ ಬೋಸ್ ಜತೆ ನಾನು ಕೂಡ ಬರುತ್ತೇನೆ. ಸ್ಥಳೀಯವಾಗಿ ಜನರ ಸಮಸ್ಯೆಗಳನ್ನ ಆಲಿಸಿ, ಬಾಕಿ ಉಳಿದಿರುವ ಅಭಿವೃದ್ಧಿ ಕೆಲಸಗಳನ್ನು ಪೂರ್ಣಗೊಳಿಸುತ್ತೇವೆ. ಮತಗಳವು ವಿರುದ್ಧದ ಅಭಿಯಾನ ರಾಷ್ಟ್ರೀಯ ಚಳವಳಿಯಾಗಿ ರೂಪುಗೊಳ್ಳಬೇಕಿರುವುದರಿಂದ ಕಾರ್ಯಕರ್ತರು ಹಳ್ಳಿಗಾಡಿನ ಜನರಿಗೆ ಮಾಹಿತಿ ನೀಡಬೇಕು.
ಡಾ.ಎಚ್.ಸಿ.ಮಹದೇವಪ್ಪ
ಜಿಲ್ಲಾ ಉಸ್ತುವಾರಿ ಸಚಿವ