ಬಿಜೆಪಿ ಸರ್ಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಪುಟ್ಟಸ್ವಾಮಿ ಗೌಡ

karmika gataka
Published on

ಮಡಿಕೇರಿ: ಕೇಂದ್ರ ಬಿಜೆಪಿ ಸರ್ಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದ್ದು, ದೇಶದ ರಕ್ಷಣೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಪುಟ್ಟಸ್ವಾಮಿ ಗೌಡ ಹೇಳಿದರು.


ಮಡಿಕೇರಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕೊಡಗು ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.


ಎಲ್ಲಾ ರಾಷ್ಟ್ರಗಳು ಭಾರತದ ಸಂಸತ್ ಭವನ ನೋಡಿ ಮೆಚ್ಚಿಕೊಂಡಿತ್ತು. ಆದರೆ, ಈಗ ಲೋಕಸಭೆಯಲ್ಲಿ ಭದ್ರತಾ ಲೋಪವಾಗಿರೋದು ವಿಶ್ವ ಮಟ್ಟದಲ್ಲಿ ತಲೆತಗ್ಗಿಸುವಂತಾಗಿದೆ. ಇದಕೆಲ್ಲಾ ಸಂಸದ ಪ್ರತಾಪ್ ಸಿಂಹ ನೇರ ಹೊಣೆಯಾಗಿದ್ದಾರೆ. ಉದ್ದೇಶಪೂರ್ವಕವಾಗಿ ದಾಳಿಕೋರರಿಗೆ ಪ್ರವೇಶ ನೀಡಲಾಗಿದೆ. ಇದೇ ಕೃತ್ಯ ಕಾಂಗ್ರೆಸ್ ಸಂಸದರಿಂದ ನಡೆದಿದ್ದರೆ, ದೇಶಾದ್ಯಂತ ಪ್ರತಿಭಟನೆ ನಡೆಸಿ ಕಾಂಗ್ರೆಸಿಗರನ್ನು ಭಯೋತ್ಪಾದಕರೆಂದು ಬಿಂಬಿಸುತ್ತಿದ್ದರು. ದಾಳಿಯ ಕುರಿತು ಪ್ರಶ್ನಿಸಲು ಮುಂದಾದ ವಿಪಕ್ಷದ ಸಂಸದರನ್ನು ಅಮಾನತು ಮಾಡುವ ಮೂಲಕ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.


ದೇಶವನ್ನು ಸಮೃದ್ಧಿಯ ನಾಡಾಗಿಸುವ, ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಪ್ರಧಾನಿ ಮೋದಿಯ ಭರವಸೆ ಸುಳ್ಳಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ರೈತರು ಬದುಕಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದುತ್ವದ ರಾಜಕಾರಣ ಮಾಡ್ತಿದ್ದಾರೆ ಎಂದಿರುವ ಪುಟ್ಟಸ್ವಾಮಿ, ದೇಶದ ರಕ್ಷಣೆಗಾಗಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ಪಡೆಯುವ ಅನಿವಾರ್ಯತೆ ಇದೆ ಎಂದರು.


ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಕಾರ್ಮಿಕ ಘಟಕ ಬಲಗೊಂಡರೆ ಪಕ್ಷದ ಬಲವೂ ಹೆಚ್ಚುತ್ತದೆ. ಪಕ್ಷದಲ್ಲಿನ ಭಿನ್ನಾಭಿಪ್ರಾಯ, ಅಸಮಾಧಾನ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಜವಾಬ್ದಾರಿ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರ ಮೇಲಿದ್ದು, ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಸಲಹೆ ನೀಡಿದರು.


ಈ ಸಂದರ್ಭ ಕೊಡಗು ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ನೂತನ ಅಧ್ಯಕ್ಷರಾಗಿ ದಿನೇಶ್‌ರವರನ್ನು ನೇಮಕ ಮಾಡಲಾಯಿತು. ಕಾಂಗ್ರೆಸ್ ಜಿಲ್ಲಾಧಕ್ಷ ಧರ್ಮಜಾ ಉತ್ತಪ್ಪ, ಕೆಪಿಸಿಸಿ ಉಪಾಧ್ಯಕ್ಷೆ ಹರಿಣಾಕ್ಷಿ, ಮಾಜಿ ಎಂಎಲ್ಸಿ ವೀಣಾ ಅಚ್ಚಯ್ಯ, ಹಿರಿಯ ಮುಖಂಡ ಟಿ.ಪಿ.ರಮೇಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಮಾಜಿ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net