

ಮೈಸೂರು: ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಹಾಗೂ ಜೆಎಸ್‌ಎಸ್ ಶಾಲೆ ಸಹಯೋಗದಲ್ಲಿ ಸುತ್ತೂರಿನಲ್ಲಿ 2500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ಅವರು, ಯೋಗವು ಒತ್ತಡ ನಿಯಂತ್ರಿಸುವಲ್ಲಿ ಹಾಗೂ ವ್ಯಕ್ತಿಯ ಮಾನಸಿಕ ಆರೋಗ್ಯದ ನಿರ್ವಹಣೆಯಲ್ಲಿ ಸಹಕಾರಿ ಎಂಬ ವಿಷಯವನ್ನು ನೆರೆದಿದ್ದವರಿಗೆ ಮನವರಿಕೆ ಮಾಡಿದರು.
ಅಕಾಡೆಮಿಯ ಕುಲಸಚಿವ ಡಾ ಬಿ. ಮಂಜುನಾಥ, ಶೈಕ್ಷಣಿಕ ಡೀನ್ ಡಾ. ವಿಶಾಲ್‌ಕುಮಾರ್ ಗುಪ್ತ, ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದ ಆಡಳಿತಾಧಿಕಾರಿ ಎಸ್.ಆರ್. ಸತೀಶ್‌ಚಂದ್ರ, ಜೆಎಸ್‌ಎಸ್ ಶಾಲೆಯ ಸಂಯೋಜಕ ಜಿ.ಎಲ್. ತ್ರಿಪುರಾಂತಕ ಇತರರು ಇದ್ದರು.