ಸಾಮೂಹಿಕ ವಿವಾಹದಿಂದ ಬಡತನ ದೂರ: ಎಸ್ಪಿ ಸಿ.ಬಿ.ವೇದಮೂರ್ತಿ ಅಭಿಮತ

110320 Sultanpura Mass Wedding Function
Published on

ದೇವದುರ್ಗ: ಮದುವೆ ಮಾಡುವುದು, ಮನೆ ಕಟ್ಟುವುದು ಬಡವರ ಪಾಲಿಗೆ ಕಷ್ಟವೇ ಸರಿ. ಇಂಥ ಸ್ಥಿತಿ ನೋಡಿದ ಮಠಗಳು ಸಾಮೂಹಿಕ ವಿವಾಹದಂಥ ಕಾರ್ಯಕ್ರಮ ಆಯೋಜಿಸುತ್ತಿವೆ. ಇಂಥ ಕಾರ್ಯಕ್ರಮಗಳಿಂದ ಬಡತನ ದೂರ ಮಾಡಬಹುದು ಎಂದು ಎಸ್ಪಿ ಸಿ.ಬಿ.ವೇದಮೂರ್ತಿ ಹೇಳಿದರು.

ಸುಲ್ತಾನಪುರದ ಶ್ರೀ ಪಂಚಾಕ್ಷರಿ ಬೃಹನ್ಮಠದಲ್ಲಿ ಜಾತ್ರೆ ನಿಮಿತ್ತ ಆಯೋಜಿಸಿದ್ದ ಸಾಮೂಹಿಕ ವಿವಾಹ, ಜಂಗಮ ವಟುಗಳಿಗೆ ಅಯ್ಯಚಾರ ದೀಕ್ಷೆ ಹಾಗೂ ಧರ್ಮಸಭೆ ಉದ್ಘಾಟಿಸಿ ಬುಧವಾರ ಮಾತನಾಡಿದರು. ಮಹಿಳೆಯರಿಗೆ ಶಿಕ್ಷಣ ನೀಡಿದರೆ ಬಡತನ, ಅನಕ್ಷರತೆ, ಕಂದಾಚಾರ ದೂರು ಮಾಡಬಹುದು ಎಂದರು.

ದೇವಾಪುರ ಹಿರೇಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಉಪನ್ಯಾಸ ನೀಡಿ, ಗುರುಗಳು ಸಮಾಜಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಾಗ ಮಾತ್ರ ಭಕ್ತರು ಅವರ ಜಾತ್ರೆ ನಡೆಸುತ್ತಾರೆ. ಕಲ್ಲಿನ ಮಂಟಪ ಕಟ್ಟುವುದು ಮಠವಲ್ಲ. ಸಂಸ್ಕಾರ, ಜ್ಞಾನ, ಸಂಸ್ಕೃತಿಯಿಂದ ಮಠಗಳನ್ನು ಕಟ್ಟಬೇಕಿದೆ. ಭಕ್ತರ ಭಕ್ತಿಯೇ ಮಠದ ಆಸ್ತಿಯಾಗಬೇಕು. ಕರೆಯದೇ ಬರುವವನೇ ನಿಜವಾದ ಭಕ್ತ. ಗುರುಗಳು ಕಣ್ಣುಗಳಾದರೆ, ಭಕ್ತರು ಕೈಗಳಾಗಿ ಸಮಾಜ ಸೇವೆ ಮಾಡಬೇಕಾಗಿದೆ. ಇಂಥ ಮಠಗಳಲ್ಲಿ ಸುಲ್ತಾನಪುರದ ಮಠ ಒಂದಾಗಿದೆ ಎಂದರು.

7 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ವಧುವರರಿಗೆ ಸಸಿಗಳನ್ನು ವಿತರಿಸಲಾಯಿತು. ನಂತರ ಜಂಗಮ ವಟುಗಳಿಗೆ ಅಯ್ಯಚಾರ ದೀಕ್ಷೆ ನೀಡಲಾಯಿತು. ಶ್ರೀ ಶಂಭುಸೋಮನಾಥ ಶಿವಾಚಾರ್ಯ ಸ್ವಾಮಿಗಳ ತುಲಾಭಾರ ಜರುಗಿತು. ಬೆಳಗ್ಗೆ ದೇವಸ್ಥಾನದಲ್ಲಿ ಶ್ರೀಗಳ ಕರ್ತೃ ಗದ್ದುಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚಾನೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.

ಶ್ರೀ ಮಠದ ಪೀಠಾಧಿಪತಿ ಶಂಭುಸೋಮನಾಥ ಶಿವಾಚಾರ್ಯ ಸ್ವಾಮೀಜಿ, ರಾಯಚೂರಿನ ಶ್ರೀ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ, ಗಬ್ಬೂರಿನ ಶ್ರೀ ಬೂದಿಬಸವ ಶಿವಾಚಾರ್ಯ ಸ್ವಾಮೀಜಿ, ನೀಲಗಲ್‌ನ ಡಾ.ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀ ಕಂಠ ಶಿವಾಚಾರ್ಯ ಸ್ವಾಮೀಜಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net