ಏ.21ರಿಂದ ಪಾಲಿಕೆ ವ್ಯಾಪ್ತಿಯಲ್ಲಿ ಸಾಮೂಹಿಕ ಮತ ಜಾಗೃತಿ

Vijayavani-logo
Published on

ಬೆಂಗಳೂರು: ಮಹಾನಗರದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತ ಪ್ರಮಾಣ ಹೆಚ್ಚಿಸುವ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಎಲ್ಲೆಡೆ ಏಕಕಾಲದಲ್ಲಿ ಮತ ಜಾಗೃತಿ ಮೂಡಿಸಲು ಏ.21ರಿಂದ ಅಭಿಯಾನ ಕೈಗೊಳ್ಳಲು ಚುನಾವಣಾ ಆಯೋಗ ಮುಂದಾಗಿದೆ.

ಪ್ರತೀ ಚುನಾವಣೆಯಲ್ಲೂ ಬೆಂಗಳೂರು ನಗರದಲ್ಲಿ ಕಡಿಮೆ ಮತದಾನವಾಗುತ್ತಿದೆ. ಐಟಿ ಸಿಟಿ ಖ್ಯಾತಿಯ ನಗರಕ್ಕೆ ಇದು ಕಪ್ಪುಚುಕ್ಕೆ ಎಂಬ ಮಾತು ಕೇಳಿಬಂದಿದೆ. ಆಯಾ ಚುನಾವಣೆ ಸಂದರ್ಭದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ, ಮತದಾನದ ದಿನ ನಾಗರಿಕರು ಮತಗಟ್ಟೆಗೆ ಬಂದು ಮತ ಹಾಕುತ್ತಿಲ್ಲ. ಇದಕ್ಕೆ ಪಾಲಿಕೆ ಕಾರಣಗಳನ್ನು ಹುಡುಕಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವ ಜತೆಗೆ ಮತಗಟ್ಟೆಗಳ ಸ್ಥಳ, ಅಲ್ಲಿಗೆ ತೆರಳು ಸುಲಭ ದಾರಿ ಹಾಗೂ ಬೂತ್‌ಗಳಲ್ಲಿ ಮತದಾರ ಸ್ನೇಹಿ ವ್ಯವಸ್ಥೆ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಹಾಗೂ ಚುನಾವಣಾ ಆಯೋಗದಿಂದ ಏ.21ರಿಂದ ನಗರದೆಲ್ಲೆಡೆ ಸಾಮೂಹಿಕ ಮತ ಜಾಗೃತಿ ಕೈಗೊಳ್ಳಲು ನಿರ್ಧರಿಸಲಾಗಿದೆ. ರಾಜ್ಯಪಾಲರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಡಿಸಿ ಜನರು ಮತಗಟ್ಟೆಗೆ ಧಾವಿಸಿಬಂದು ತಮ್ಮ ಹಕ್ಕು ಚಲಾಯಿಸುವಂತೆ ಮಾಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

15 ಲಕ್ಷ ಮನೆಗಳಿಗೆ ಸ್ಟಿಕ್ಕರ್:

ನಗರದಲ್ಲಿ ಕಡಿಮೆ ಮತದಾನ ಆಗಿರುವ ಸಾವಿರಕ್ಕೂ ಹೆಚ್ಚು ಬೂತ್‌ಗಳಿವೆ. ಇಲ್ಲೆಲ್ಲ ಈ ಬಾರಿ ಮತ ಪ್ರಮಾಣ ಹೆಚ್ಚಿಸಲು ಪಾಲಿಕೆಯ ವಿವಿಧ ಹಂತದ ಅಧಿಕಾರಿಗಳು ಸ್ವತ: ಕಾರ್ಯಕ್ಷೇತ್ರಕ್ಕೆ ಇಳಿಯಲಿದ್ದಾರೆ. ಸರಿಸುಮಾರು 15 ಲಕ್ಷ ಮನೆಗಳಿಗೆ ಏ.26ರಂದು ತಪ್ಪದೇ ಮತದಾನ ಮಾಡಿ ಹಕ್ಕು ಚಲಾಯಿಸಿರಿ ಎಂಬ ಧ್ಯೇಯವಾಕ್ಯವುಳ್ಳ ಸ್ಟಿಕ್ಕರ್‌ಅನ್ನು ಮನೆಗಳಿಗೆ ಅಂಟಿಸಲಾಗುತ್ತದೆ. ಈ ಕೆಲಸಕ್ಕೆ ಒಂದೆರಡು ದಿನಗಳ ಹಿಂದೆ ಚಾಲನೆ ದೊರೆತಿದ್ದು, ಗುರುವಾರದಿಂದ ಇನ್ನಷ್ಟು ವೇಗ ನೀಡಲಾಗುತ್ತದೆ ಎಂದು ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net