ಶ್ರಾವಣ ಮಾಸದ ವರಮಹಾಲಕ್ಷ್ಮೀ ಪೂಜೆ ಶ್ರೇಷ್ಟ: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ನಿರ್ದೇಶಕಿ ಚೇತನಾ ಅಭಿಮತ

2
Published on

ಮಂಡ್ಯ: ಹಿಂದು ಶಾಸ್ತ್ರದ ಪ್ರಕಾರ ಶ್ರಾವಣ ಮಾಸದ ಶುಕ್ರವಾರದಲ್ಲಿ ನಡೆಯುವ ವರ ಮಹಾಲಕ್ಷ್ಮೀ ಪೂಜೆ ಬಹಳ ಶ್ರೇಷ್ಟವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ನಿರ್ದೇಶಕಿ ಎಂ.ಚೇತನಾ ಅಭಿಪ್ರಾಯಪಟ್ಟರು.

ತಾಲೂಕಿನ ಚಿಕ್ಕಮಂಡ್ಯ ಗ್ರಾಮದಲ್ಲಿ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಶಂಕರಮಠ ಹಾಗೂ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆಯಲ್ಲಿ ಮಾತನಾಡಿದ ಅವರು, ಆಡಂಬರ ಬಿಟ್ಟು ಶ್ರದ್ದಾ ಭಕ್ತಿಯಿಂದ ಸಂಪ್ರದಾಯ ಬದ್ದವಾಗಿ ನಮ್ಮ ಪೂಜೆ ಮತ್ತು ವ್ರತಗಳು ಆಚರಣೆಯಾಗಬೇಕಿದೆ ಎಂದರು.

ಹೆಣ್ಣು ಮಗುವಾದರೆ ಲಕ್ಷ್ಮೀ ಜನಿಸಿದಳೆಂದು ಸಂತಸ ಪಡುತ್ತೇವೆ. ಅದೇ ರೀತಿ ಶ್ರದ್ದಾ ಭಕ್ತಿಯ ಪೂಜೆಯಿಂದ ಅಷ್ಟ ಲಕ್ಷ್ಮೀಯರನ್ನು ಓಲೈಸಿಕೊಳ್ಳುವ ಸಾಮರ್ಥ್ಯ ಮನೆಯ ಗೃಹಿಣಿಯರಿಗಿರುತ್ತದೆ. ಮುಂಜಾನೆ ಪ್ರಾತಃಕಾಲದಲ್ಲಿ ಎದ್ದು ಮನೆಯನ್ನು ಸ್ವಚ್ಛಗೊಳಿಸಿ ಪೂಜೆ ಕೈಂಕರ್ಯ ನೆರವೇರಿಸಿದರೆ ಒಳಿತಾಗಲಿದೆ. ಪ್ರತಿ ಹೆಣ್ಣು ಮಗಳು ಧರಿಸುವ ಅರಿಸಿನ, ಕುಂಕುಮ, ಕರಿಮಣಿ ಸರದ ತಾಳಿ, ಬಳೆ, ಕಾಲುಂಗುರ, ಕಾಲ್ಗೆಜ್ಜೆಗಳು ವೈಜ್ಞಾನಿಕ ಕಾರಣವಾಗಿದೆ. ಹಿರಿಯ ಸಂಸ್ಕಾರ ಹಾಗೂ ಕಾಳಜಿಯನ್ನು ಇಂದಿನ ಯುವ ಜನಾಂಗ ರೂಢಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಜಿಲ್ಲಾ ಕಾರ್ಯನಿರತ ಪ್ರರ್ತಕರ್ತರ ಸಂಘದ ಅಧ್ಯಕ್ಷ ಕೆ.ಸಿ.ಮಂಜುನಾಥ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉತ್ತರ ವಲಯದ ಕ್ಷೇತ್ರ ಶಿಕ್ಷಣ ಸಂಯೋಜಕ ಟಿ.ಡಿ.ಸ್ವಾಮಿ, ಮಂಡ್ಯ ಗ್ರಾಮಾಂತರ ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ, ಗ್ರಾಪಂ ಸದಸ್ಯರಾದ ಗೀತಾ, ಮಧು, ವಿಶ್ವ, ಅರ್ಚಕ ರಾಮಚಂದ್ರ ಭಟ್ಟ, ತಾಲೂಕು ಯೋಜನಾಧಿಕಾರಿ ಮಮತಾ, ಮೇಲ್ವಿಚಾರಕ ದಿನೇಶ್, ಮುಖಂಡರಾದ ಧನಂಜಯ, ಲಕ್ಷ್ಮೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net