

ಹರಿಹರ: ಬ್ಯಾಂಕ್ ಮತ್ತು ಫಲಾನುಭವಿಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಧರ್ಮಸ್ಥಳ ಸಂಸ್ಥೆಯ ಸೇವೆ ಸ್ಮರಣೀಯ ಎಂದು ಕೋಡಿಯಾಲ ಗ್ರಾಮದ ಪುಣ್ಯಕೋಟಿ ಮಠದ ಜಗದೀಶ್ವರ ಶ್ರೀ ಹೇಳಿದರು.
ನಗರದ ಅಮರಾವತಿ ಕಾಲನಿ ಸಾಯಿ ಬಾಬಾ ದೇವಸ್ಥಾನದಲ್ಲಿ ಶನಿವಾರ ಧರ್ಮಸ್ಥಳ ಸಂಸ್ಥೆಯ ಕೆ.ಆರ್. ವಲಯ ಸಹಯೋಗದಿಂದ ನಡೆದ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ಹಾಗೂ ಧಾರ್ಮಿಕ ಸಭೆ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕಪ್ಪು ಚುಕ್ಕೆ ಇಲ್ಲದೆ ಧಾರ್ಮಿಕ, ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ಕೆಲವರು ಪಿತೂರಿ ನಡೆಸುತ್ತಿರುವುದು ಬೇಸರದ ಸಂಗತಿ. ಮಹತ್ತರ ಸಾಧನೆ ಮಾಡುತ್ತಿರುವವರಿಗೆ ಇಂತಹ ಕಂಟಕ ಸಾಮಾನ್ಯ. ಈ ಕಂಟಕದಿಂದ ಅವರು ಪಾರಾಗುತ್ತಾರೆಂಬ ವಿಶ್ವಾಸ ಇದೆ ಎಂದರು.
ಸಂಸ್ಥೆಯ ಜಿಲ್ಲಾ ನಿರ್ದೇಶಕ ಎಂ. ಲಕ್ಷ್ಮಣ ಮಾತನಾಡಿ, ಸಂಸ್ಥೆಯು ಕೇವಲ ಆರ್ಥಿಕ, ಸಾಮಾಜಿಕ ಚಟುವಟಿಕೆಗಳಿಗೆ ಸೀಮಿತವಾಗಿಲ್ಲ. ಧಾರ್ಮಿಕ ಕಾರ್ಯಗಳ ಮೂಲಕ ಸಮಾಜದಲ್ಲಿ ಸಂಸ್ಕಾರ ಮೂಡಿಸಲು ಆದ್ಯತೆ ನೀಡುತ್ತಿದೆ ಎಂದರು.
ರೂ. 100 ಕೋಟಿ ಸಾಲ: ಸಂಸ್ಥೆ ತಾಲೂಕು ಯೋಜನಾಧಿಕಾರಿ ಗಣಪತಿ ಮಾಳಂಜಿ ಮಾತನಾಡಿ, ಈವರೆಗೆ ತಾಲೂಕಿನ ವಿವಿಧ ಸಂಘಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ರೂ. 100 ಕೋಟಿಯಷ್ಟು ಸಾಲ ಮಂಜೂರು ಮಾಡಿಸಲಾಗಿದೆ. ಸುಜ್ಞಾನ ನಿಧಿ ಶಿಷ್ಯ ವೇತನ ಕಾರ್ಯಕ್ರಮದಡಿ ತಾಲೂಕಿನ 415 ಬಡ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ವಿತರಣೆ ಮಾಡಲಾಗಿದೆ ಎಂದರು.
ನಗರಸಭಾಧ್ಯಕ್ಷೆ ನಿಂಬಕ್ಕ ಚಂದಾಪುರ ಅಧ್ಯಕ್ಷತೆ ವಹಿಸಿದ್ದರು. ಸಾಯಿ ಬಸವ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಎ.ಪರಮೇಶ್ವರಪ್ಪ, ಅಮರಾವತಿ ಎ.ಬಿ. ಹನುಮಗೌಡ್ರು, ಜಿ. ಬಸವಲಿಂಗಪ್ಪ, ಎಚ್. ಪಾಲಾಕ್ಷಪ್ಪ, ಚನ್ನವೀರಗೌಡ್ರು, ಹನಗವಾಡಿ ಗ್ರಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮವ್ವ ವಾಮದೇವಪ್ಪ, ಪೂಜಾ ಸಮಿತಿ ಅಧ್ಯಕ್ಷೆ ಆರತಿ ಕುಲಕರ್ಣಿ, ಪ್ರಸನ್ನಕುಮಾರ್, ಸುನೀಲ್ ವಣ್ಣೂರು, ಮೃತ್ಯುಂಜಯ ಮತ್ತಿತರರಿದ್ದರು.