

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಶ್ರೀಕ್ಷೇತ್ರ ಕೈವಾರದ ಶ್ರೀ ಯೋಗಿ ನಾರೇಯಣ ಮಠದಲ್ಲಿ ಶ್ರಾವಣ ಮಾಸದ ಪ್ರಥಮ ಶ್ರಾವಣ ಶುಕ್ರವಾರದಂದು ಸಾಮೂಹಿಕ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಕೈಗೊಂಡಿದ್ದು ಪ್ರಾತ:ಕಾಲ ಘಂಟನಾದ, ಸುಪ್ರಭಾತ ಹಾಗೂ ಗೋಪೂಜೆಯೊಂದಿಗೆ ಪೂಜೆಗಳೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮಠದ ಸಭಾಂಗಣದಲ್ಲಿ ಶ್ರೀ ಲಕ್ಷ್ಮೀ ಅಮ್ಮನವರ ವಿಗ್ರಹವನ್ನು ಪ್ರತಿಷ್ಠಾಪಿಸಿ, ಅಭಿಷೇಕವನ್ನು ಸಲ್ಲಿಸಲಾಯಿತು. ವಿವಿಧ ಪೂಜೆಯನ್ನು ನೆರವೇರಿಸಲಾಯಿತು. ತಾತಯ್ಯನವರ ಉತ್ಸವ ವಿಗ್ರಹವನ್ನು ದೇವಾಲಯದಿಂದ ಸರ್ವಾಲಂಕೃತ ಪಲ್ಲಕ್ಕಿಯಲ್ಲಿ ಮಂಗಳವಾದ್ಯಗಳೊಂದಿಗೆ ತರಲಾಯಿತು. ಬಗೆಬಗೆಯ ಹೂವುಗಳಿಂದ ಆಕರ್ಷಕವಾಗಿ ಅಲಂಕೃತಗೊಂಡಿದ್ದ ವೇದಿಕೆಯು ಗಮನ ಸೆಳೆಯಿತು. ಸಾವಿರಾರು ಮಂದಿ ಮುತ್ತೆöÊದೆಯರು ವರಮಹಾಲಕ್ಷಿ÷್ಮ ಪೂಜೆಯನ್ನು ಸಾಮೂಹಿಕವಾಗಿ ಮಾಡಿದರು. ಅರ್ಚಕ ವೃಂದದವರು ಲಕ್ಷ್ಮೀ ಅಷ್ಟೋತ್ತರವನ್ನು ಹೇಳುತ್ತಿದ್ದರೆ, ಮಹಿಳೆಯರು ಕುಳಿತಲ್ಲಿಯೇ ಕುಂಕುಮಾರ್ಚನೆಯನ್ನು ಮಾಡುತ್ತ ಪೂಜಿಸಿದರು. ಅಷ್ಟಾವಧಾನ ಸೇವೆಯನ್ನು ಸಲ್ಲಿಸಿ ಮಹಾಮಂಗಳಾರತಿಯನ್ನು ಬೆಳಗಿದರು. ಮಠದ ವತಿಯಿಂದಲೇ ಪೂಜಾ ಸಾಮಗ್ರಿಗಳನ್ನು ಒದಗಿಸಲಾಗಿತ್ತು.
ಕಾರ್ಯಕ್ರಮದ ನೇತೃತ್ವವನ್ನು ಕೈವಾರ ಯೋಗಿ ನಾರೇಯಣ ಮಠದ ಧರ್ಮಾಧಿಕಾರಿ ಎಂ.ಆರ್.ಜಯರಾಮ್ ದಂಪತಿಗಳು ವಹಿಸಿದ್ದು ವಿಶೇಷ ಪೂಜೆಯನ್ನು ನೆರವೇರಿಸಿದರು. ಇದೇ ವೇಳೆ ಸದ್ಗುರು ತಾತಯ್ಯನವರು ರಚಿಸಿರುವ ಶ್ರೀರಾಮತಾರಕ ಮಂತ್ರವನ್ನು ಸಾಮೂಹಿಕವಾಗಿ ಪಠಿಸಲಾಯಿತು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೈವಾರವು ಭಕ್ತ ಸಮೂಹದಿಂದ ತುಂಬಿ ತುಳುಕಾಡಿದ್ದು ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಅನೇಕರು ಪುನೀತರಾದರು.