ಕಾಳಿಕಾಂಬ ದೇವಿ ದೇವಸ್ಥಾನದಲ್ಲಿ ಸಾಮೂಹಿಕ ಉಪನಯನ, ಅಕ್ಷರಾಭ್ಯಾಸ ಕಾರ್ಯಕ್ರಮ

22ss1kumkumarchane
ಗುಡುಗಳಲೆ ಕಾಳಿಕಾಂಬದೇವಿ ದೇವಸ್ಥಾನದಲ್ಲಿ ವಾರ್ಷಿಕ ಪೂಜಾ ಮಹೋತ್ಸವ ಪ್ರಯುಕ್ತ ಮಹಿಳಾ ಭಕ್ತರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು.
Published on

ಶನಿವಾರಸಂತೆ: ಸಮಿಪದ ಗುಡುಗಳಲೆ ಜಾತ್ರಾ ಮೈದಾನದಲ್ಲಿರುವ ಶ್ರೀ ಕಾಳಿಕಾಂಬ ದೇವಿ ದೇವಸ್ಥಾನದ 9ನೇ ವಾರ್ಷಿಕೋತ್ಸವದ ಪೂಜಾ ಮಹೋತ್ಸವ ಅಂಗವಾಗಿ ಬುಧವಾರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಸಾಮೂಹಿಕ ಉಪನಯನ, ದೇವಿಗೆ ಸಾಮೂಹಿಕ ಕುಂಕುಮಾರ್ಚನೆ ಹಾಗೂ ಚಿಕ್ಕ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಶ್ರೀ ವಿಶ್ವಕರ್ಮ ಸಮಾಜದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಾರ್ಷಿಕೋತ್ಸವ ಅಂಗವಾಗಿ ಮುಂಜಾನೆ 6 ಗಂಟೆಯಿಂದಲೇ ದೇವಸ್ಥಾನದಲ್ಲಿ ಮಹಾಗಣಪತಿ ಪೂಜೆ, ಸ್ವಸ್ತಿಶ್ರೀ ಪುಣ್ಯಾಹವಾಚನ, ಮಾತೃಕಾನಾಂದಿ, ನವಗ್ರಹಾರಾಧನ, ಅಗ್ನಿಪ್ರತಿಷ್ಠಾಪನಾ, ಮಹಾಗಣಪತಿ ಹೋಮ, ದುರ್ಗಾಹೋಮ, ಸಾಹಿತ್ಯ ಯದೂಶಹೋಮ, ಚೌಲಹೋಮ, ಚೌಲಕರ್ಮ, ಶುದ್ಧಿ, ಮಾತೃ ಸಹಭೋಜನ, ಯಜ್ಞೋಪವೀತ ಧಾರಣೆ ಮುಂತಾದ ಕಾರ್ಯ ನೆರವೇರಿತು. ಬೆಳಗ್ಗೆ 10.30 ರಿಂದ 11.30 ರವರೆಗೆ ಬ್ರಹ್ಮೋಪದೇಶ ನಡೆಯಿತು. 11.30ರಿಂದ ಮಹಿಳೆಯರಿಂದ ದೇವಿಗೆ ಸಾಮೂಹಿಕ ಕುಂಕುಮಾರ್ಚನೆ ಕಾರ್ಯ ನಡೆಯಿತು.

ದೇವಸ್ಥಾನದ ವಾರ್ಷಿಕ ಪೂಜಾ ಮಹೋತ್ಸವ ಪ್ರಯುಕ್ತ ಗಣಪತಿ ಪೂಜೆ, ಪುಣ್ಯಾಹ, ದೇವತನಾಂದಿ, ಅಂಕುರಾರ್ಪಣ ಪೂಜೆ ನಂತರ ದೇವಿಗೆ ಅಭಿಷೇಕ, ನವಗ್ರಹ ಪೂಜೆ ತದನಂತರ ಗಣಪತಿ ಹೋಮ, ವಿಶ್ವಕರ್ಮ ಹೋಮ ನೆರವೇರಿಸಲಾಯಿತು. ತದನಂತರ ಸಾಮೂಹಿಕ ಉಪನಯನ, ಬ್ರಹ್ಮೋಪದೇಶ ಕಾರ್ಯಕ್ರಮ ನಡೆಯಿತು. ಬಳಿಕ ಲೋಕಕಲ್ಯಾಣಕ್ಕಾಗಿ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು. ದೇವಸ್ಥಾನದ ವಾರ್ಷಿಕ ಪೂಜಾ ಮಹೋತ್ಸವದ ಪ್ರಯುಕ್ತ 3 ವರ್ಷದಿಂದ 5 ವರ್ಷದ ಮಕ್ಕಳಿಗೆ ಸಾಮೂಹಿಕ ಅಕ್ಷರಾಭ್ಯಾಸ ಮಾಡಿಸಲಾಯಿತು. ದೇವಿಗೆ ಮಹಾಮಂಗಳಾರತಿ ನಂತರ ಭಕ್ತರಿಗೆ ತೀರ್ಥಪ್ರಸಾದ ವಿನಿಯೋಗ ಮಾಡಲಾಯಿತು.

ಪ್ರಧಾನ ಪುರೋಹಿತ ಶ್ರೀ ಶಂಕರಾಚಾರ್ಯ ಬೆಳಗುಲಿ ನೇತೃತ್ವದಲ್ಲಿ ಅರ್ಚಕರಾದ ಶರತ್ ಮತ್ತು ಅರ್ಚಕರ ತಂಡ ಪೂಜಾ ಕೈಂಕರ್ಯ ನೆರವೇರಿಸಿತು. ಕಲಬುರಗಿಯ ತಿಂಕಿಣಿ ಮೌನೇಶ್ವರ ಮಠದ ಶ್ರೀ ಬ್ರಹ್ಮಾನಂದ ಸ್ವಾಮೀಜಿ, ಮೈಸೂರಿನ ನಂಜುಂಡಸ್ವಾಮಿ, ಕಾಳಿಂಕಾಂಬ ದೇವಿ ದೇವಸ್ಥಾನದ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು. ದೇವಸ್ಥಾನ ಸಮಿತಿ ವತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು. ಪೂಜಾ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net