ಸಾಮೂಹಿಕ ಉಪನಯನ, ಬ್ರಹ್ಮೊಕಪದೇಶ ಕಾರ್ಯಕ್ರಮ

11blrp1
-ಶ್ರೀ ರಾಮಾನುಜ ತಿರುನಕ್ಷತ್ರದ ಅಂಗವಾಗಿ ಬೇಲೂರು ಹಾಗೂ ಚಿಕ್ಕಮಗಳೂರು ವೈಷ್ಣವ ಸಂಘದಿಂದ ಆಯೋಜಿಸಿದ್ದ ಸಾಮೂಹಿಕ ಉಪನಯನ, ಜನಿವಾರ ಧಾರಣೆ ನಂತರ ಮೆರವಣಿಗೆಯಲ್ಲಿ ಸಾಗುತ್ತಿರುವ ವಟುಗಳು.
Published on

ಬೇಲೂರು: ಬೇಲೂರು ಹಾಗೂ ಚಿಕ್ಕಮಗಳೂರು ವೈಷ್ಣವ ಸಂಘದಿಂದ ಶ್ರೀ ರಾಮಾನುಜ ತಿರುನಕ್ಷತ್ರದ ಅಂಗವಾಗಿ ಶ್ರೀ ತ್ರಿದಂಡಿ ವೆಂಕಟರಾಮಾನುಜ ಜಿಯರ್ ಅವರ ಆಶೀರ್ವಾದದೊಂದಿಗೆ ಸಾಮೂಹಿಕ ಉಪನಯನ, ಜನಿವಾರ ಧಾರಣೆ ಬ್ರಹ್ಮೊಕಪದೇಶ ಕಾರ್ಯಕ್ರಮ ಸಮುದಾಯದ ಭಕ್ತರ ಸಮ್ಮುಖದಲ್ಲಿ ಭಾನುವಾರ ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ನೆರವೇರಿತು.

ಶ್ರೀ ರಾಮಾನುಜ ತಿರುನಕ್ಷತ್ರದ ಅಂಗವಾಗಿ ಭಾನುವಾರ ಮುಂಜಾನೆಯಿಂದಲೇ ಪವಿತ್ರ ಸಾಮೂಹಿಕ ಯಜ್ಞೋಪಧಾರಣೆಯಲ್ಲಿ 45 ವಟುಗಳು ಪಾಲ್ಗೊಂಡಿದ್ದರು. ಗುರುಗಳಾದ ಶ್ರೀ ತ್ರಿದಂಡಿ ವೆಂಕಟ ರಾಮಾನುಜ ಜೀಜರ್ ನೇತೃತ್ವದಲ್ಲಿ ಯಜ್ಞ ಯಾಗದಿಗಳು ನಡೆದವು. ಗಾಯತ್ರಿ ಮಂತ್ರದೊಂದಿಗೆ ಯಜ್ಞೊಪತೀತ ಧಾರಣೆ ಪವಿತ್ರ ಜನಿವಾರ ತೊಡಿಸುವ ಮೂಲಕ ವಟುಗಳಿಗೆ ಸಾಮೂಹಿಕ ಉಪನಯನ ಮಾಡಿಸಲಾಯಿತು.

ಶ್ರೀ ತ್ರಿದಂಡ ವೆಂಕಟರಾಮಾನುಜ ಜಿಯರ್ ಮಾತನಾಡಿ, ಉಪನಯನ ಎಂಬುವುದು ಹಿಂದು ಧರ್ಮದ ಪ್ರಕಾರ ಪ್ರಮುಖ ಸಂಸ್ಕಾರ. ಬಾಲ್ಯದಲ್ಲಿರುವ ಮಕ್ಕಳಿಗೆ ವೇದಾದ್ಯಯನ ಮತ್ತು ಆಧ್ಯಾತ್ಮಿಕ ಜೀವನಕ್ಕೆ ದೀಕ್ಷೆ ನೀಡುವ ಈ ಸಂಸ್ಕಾರ ದ್ವಿಜ ಎರಡು ಬಾರಿ ಹುಟ್ಟಿದವನೆಂದು ಪರಿಗಣಿಸುತ್ತೇವೆ. ಇಲ್ಲಿ ಪ್ರಮುಖವಾಗಿ ಒಂದು ಜೈವಿಕ ಜನನ ಹಾಗೂ ಆಧ್ಯಾತ್ಮಿಕ ಜನನ. ವಟುಗಳು ಗಾಯತ್ರಿ ಮಂತ್ರ ಉಪದೇಶಿಸಿ ಬ್ರಹ್ಮಚಾರ್ಯಾಶ್ರಮ ಪ್ರವೇಶಿಸುತ್ತಾರೆ. ಇದು ಶಿಸ್ತುಬದ್ದ ಜೀವನಕ್ಕೆ ದಾರಿಯಾಗುತ್ತದೆ. ಜತೆಗೆ ಗುರುಕುಲದ ವಾಸವು ನಿಮಗೆ ಜ್ಞಾನವನ್ನು, ಸಂಸ್ಕಾರವನ್ನು ಮತ್ತು ಶಿಸ್ತನ್ನು ಕಲಿಸಿ ಕೊಡುತ್ತದೆ. ನಮ್ಮ ಋಷಿ ಮುನಿಗಳು ತೋರಿಸಿದ ಮಾರ್ಗದಲ್ಲಿ ನಡೆಯುತ್ತಾ, ವೇದಗಳ ಅಧ್ಯಯನದಿಂದ ಆತ್ಮ ಜ್ಞಾನವನ್ನು ಪಡೆಯಬೇಕು. ಗುರುಗಳ ಆಜ್ಞೆಯನ್ನು ಪಾಲಿಸಿ, ಸದಾ ಸತ್ಯವನ್ನು ನುಡಿಯಿರಿ, ಧರ್ಮವನ್ನು ಆಚರಿಸುವ ಮೂಲಕ ನಿಮ್ಮ ತಂದೆ-ತಾಯಿಗಳು ನಿಮಗೆ ನೀಡಿದ ಈ ಸದಾವಕಾಶ ಸದುಪಯೋಗ ಪಡಿಸಿಕೊಳ್ಳಿ. ಶ್ರದ್ಧೆ ಮತ್ತು ಭಕ್ತಿಯಿಂದ ಜ್ಞಾನವನ್ನು ಸಂಪಾದಿಸಿ ಉತ್ತಮ ನಡತೆಯಿಂದ ಸಮಾಜದಲ್ಲಿ ಗೌರವವನ್ನು ಗಳಿಸಿ ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದು ಆಶೀರ್ವದಿಸಿದರು.

ವೈಷ್ಣವ ಸಂಘದ ಕಾರ್ಯದರ್ಶಿ ನಾಗರತ್ನಮ್ಮ ಮಾತನಾಡಿದರು. ವೈಷ್ಣವ ಸಂಘದ ಅಧ್ಯಕ್ಷ ಶ್ಯಾಮಸುಂದರ್, ಕಾರ್ಯದರ್ಶಿ ಕೇಶವಮೂರ್ತಿ, ಉಪಾಧ್ಯಕ್ಷ ದಿಲೀಪ್ ರಾಮಣ್ಣ, ಶಾಮಣ್ಣ, ವಾಸುದೇವಮೂರ್ತಿ, ನಂದಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net