

ಶ್ರೀರಂಗಪಟ್ಟಣ: ಆರೋಗ್ಯ ಹಾಗೂ ಮಾನಸಿಕ ಸ್ಥಿತಿ ಸದೃಢವಾಗಿಟ್ಟುಕೊಳ್ಳಲು ಯೋಗ, ಧ್ಯಾನ, ಪ್ರಾಣಾಯಾಮ ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ಶ್ರೀರಂಗಪಟ್ಟಣ ದಸರಾ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಪಟ್ಟಣದ ಶ್ರೀರಂಗನಾಥ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದ್ದ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯೋಗಾಭ್ಯಾಸವನ್ನು ಅಳವಡಿಸಿಕೊಂಡರೆ ಬದುಕು ಹಸನಾಗುತ್ತದೆ. ಯೋಗದಲ್ಲಿ ಭಾರತ ವಿಶ್ವಕ್ಕೆ ಗುರುವಾಗಿದೆ. ಯೋಗಭ್ಯಾಸದಿಂದ ಮನಸ್ಸಿನ ಚಂಚಲತೆಯನ್ನು ಹೋಗಲಾಡಿಸಬಹುದು. ಆದ್ದರಿಂದ ಪ್ರತಿಯೊಬ್ಬರು ಯೋಗಾಭ್ಯಾಸ ಮತ್ತು ಧ್ಯಾನ ಮಾಡುವ ಮೂಲಕ ಸದೃಢ ಸಮಾಜವನ್ನು ನಿರ್ಮಾಣ ಮಾಡೋಣ ಎಂದು ಹೇಳಿದರು.
ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಅಷ್ಟಾಂಗ ಯೋಗವನ್ನು ಸಿದ್ಧಿಪಡಿಸಿಕೊಳ್ಳುವುದು ಸುಲಭದ ಮಾತಲ್ಲ. ಅಷ್ಟಾಂಗ ಯೋಗವನ್ನು ಸಿದ್ಧಿಪಡಿಸಿಕೊಂಡ ಎಷ್ಟು ಋಷಿ ಮುನಿಗಳು ಇಂದು ಜೀವಂತವಾಗಿದ್ದಾರೆ. ಯೋಗಕ್ಕೆ ಸರಿಸುಮಾರು 5 ಸಾವಿರ ವರ್ಷದ ಇತಿಹಾಸವಿದೆ. ಪತಾಂಜಲಿ ಮುನಿಗಳು ಯೋಗದ ಮಹತ್ವವನ್ನು ಜಗತ್ತಿಗೆ ಸಾರಿದರು. ಪ್ರಸುತ್ತ ಆಯುರ್ವೇದ ಕೇಂದ್ರಗಳು ಸ್ಥಾಪನೆಯಾಗಿದೆ. ಪ್ರವಾಸೋದ್ಯಮದಲ್ಲೂ ಸಹ ಯೋಗವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸವಾಗುತ್ತಿದೆ. ಆಯುಷ್ ಇಲಾಖೆ ಉತ್ತಮವಾದ ಕಾರ್ಯಕ್ರಮ ರೂಪಿಸಿಕೊಂಡು ಬರುತ್ತಿದೆ. ಯೋಗವನ್ನು ಕಲಿಯಲಿಕ್ಕಾಗಿ ವಿದೇಶಿಗರು ಭಾರತಕ್ಕೆ ಬರುತ್ತಿರುವುದನ್ನು ನಾವು ಕಾಣಬಹುದಾಗಿದೆ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಚೇತನಾ ಯಾದವ್, ಆಯುಷ್ ಇಲಾಖೆ ವೈದ್ಯಾಧಿಕಾರಿ ಡಾ.ಪುಷ್ಪಲತಾ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ ಇತರರಿದ್ದರು. ಇದೇ ವೇಳೆ ಸಾಮೂಹಿಕ ಸೂರ್ಯ ನಮಸ್ಕಾರ ಮಾಡಲಾಯಿತು. ಯೋಗ ಪಟುಗಳು ಹಾಗೂ ಆಯುಷ್ ಇಲಾಖೆಯವರಿದಿಂದ ನೃತ್ಯ ಪ್ರದರ್ಶನ ನಡೆಯಿತು