ಅಯೋಧ್ಯೆಯಲ್ಲಿ ಸಾಮೂಹಿಕ ಬ್ರಹ್ಮೋಪದೇಶ

udp-11-pejavara
Published on

ಉಡುಪಿ: ಅಯೋಧ್ಯೆ ರಾಮಮಂದಿರದ ವಿಶ್ವಸ್ಥ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಗುರುವಾರ ಅಯೋಧ್ಯೆಯ ಜಾನಕೀ ಘಾಟ್​ ಬಳಿ ಶ್ರೀ ರಾಮವಲ್ಲಭ ಕುಂಜ ಭವನದಲ್ಲಿ ಬೆಳಿಗ್ಗೆ 9.10ರ ಸಿಂಹಲಗ್ನ ಸುಮುಹೂರ್ತದಲ್ಲಿ ಸ್ಥಳಿಯ 25 ಮಂದಿ ಬ್ರಾಹ್ಮಣ ಸಮುದಾಯದ ಬಾಲಕರಿಗೆ ಸಾಮೂಹಿಕ ಬ್ರಹ್ಮೋದೇಶ ನೆರವೇರಿತು.

ಶ್ರೀಗಳು ಎಲ್ಲ ವಟುಗಳಿಗೂ ಕೃಷ್ಣಮಂತ್ರೋಪದೇಶದೊಂದಿಗೆ ಬ್ರಾಹ್ಮಣ್ಯದ ಕರ್ತವ್ಯಗಳನ್ನು ಜೀವನ ಪರ್ಯಂತ ಪಾಲಿಸುವಂತೆ ಸಂದೇಶ ನೀಡಿದರು. ಸಮಾರಂಭದಲ್ಲಿ ವಿಶ್ವಹಿಂದುಪರಿಷತ್ತಿನ ಪ್ರಮುಖರಾದ ರಾಜ್​ ಕುಮಾರ್​ ದಾಸ್​ ಜೀ, ಅಶೋಕ್​ ತಿವಾರಿ, ಗೋಪಾಲ್​ ಜೀ ಉಪಸ್ಥಿತರಿದ್ದರು. ನವದೆಹಲಿ ಪೇಜಾವರ ಮಠದ ವ್ಯವಸ್ಥಾಪಕ, ವೇದವ್ಯಾಸಗುರುಕುಲದ ಪ್ರಾಚಾರ್ಯ ವಿದ್ವಾನ್​ ವಿಠೋಬಾಚಾರ್ಯ ಕಾರ್ಯಕ್ರಮದ ಮೇಲ್ವಿಚಾರಣೆ ವಹಿಸಿದ್ದರು. ಪ್ರಾಧ್ಯಾಪಕ ಶ್ರೀನಿಧಿ, ಶ್ರೀಗಳ ಆಪ್ತ ಕಾರ್ಯದರ್ಶಿಗಳಾದ ವಿಷ್ಣುಮೂರ್ತಿ ಆಚಾರ್ಯ, ಕೃಷ್ಣಮೂರ್ತಿ ಭಟ್​, ಅಯೋಧ್ಯೆ ಪೇಜಾವರ ಮಠದ ವ್ಯವಸ್ಥಾಪಕ ಮಹೇಂದ್ರ ದುಬೆ ಸಹಕರಿಸಿದರು.

ವಿಧ್ಯುಕ್ತವಾಗಿ ಉಪನಯನ ವಿಧಿಗಳನ್ನು ನೆರವೇರಿಸಲಾಗಿದ್ದು, ಎಲ್ಲ ವಟುಗಳಿಗೆ ಮಧುಪರ್ಕ ಸಾಹಿತ್ಯ, ವಸ್ತ್ರ ಹಾಗೂ ಊಟೋಪಚಾರ ಸಹಿತ ಎಲ್ಲ ವೆಚ್ಚಗಳನ್ನೂ ಮಠದಿಂದಲೇ ಭರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net