

ಹನೂರು: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಈದ್ಗಾ ಮೈದಾನಗಳಲ್ಲಿ ಗುರುವಾರ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭ ಕೋರುವುದರ ಮೂಲಕ ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಪಟ್ಟಣದಲ್ಲಿ ಮುಸ್ಲಿಮರು ಬೆಳಗ್ಗೆ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಆಲಂಗಿಸಿ ಹಬ್ಬದ ಶುಭಾಶಯ ಕೋರಿದರು. ಈದ್ಗಾ ಮೈದಾನದಿಂದ ಕೆಇಬಿ ರಸ್ತೆ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣದ ಮೂಲಕ ಮೆರವಣಿಗೆ ಹೊರಟ ಮುಸ್ಲಿಮರು ಮಸೀದಿಗೆ ತೆರಳಿ ಮತ್ತೆ ಪ್ರಾರ್ಥನೆ ಸಲ್ಲಿಸಿದರು.
ವಿವಿಧೆಡೆ ಆಚರಣೆ: ತಾಲೂಕಿನ ಮಂಗಲ, ಬಂಡಳ್ಳಿ, ಕೌದಳ್ಳಿ, ಎಲ್ಲೇಮಾಳ, ದಿನ್ನಳ್ಳಿ, ಒಡೆಯರಪಾಳ್ಯ, ಸಿಂಗಾನಲ್ಲೂರು, ಕಣ್ಣೂರು, ಅಜ್ಜೀಪುರ, ಚಿಗತಾಪುರ, ಕೆ.ಗುಂಡಾಪುರ ಇನ್ನಿತರ ಗ್ರಾಮಗಳಲ್ಲಿನ ಮುಸ್ಲಿಮರು ಆಯಾ ಗ್ರಾಮದ ಈದ್ಗಾ ಮೈದಾನದಲ್ಲಿ ಈದ್ ಉಲ್ ಫಿತರ್ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಧರ್ಮಗುರುಗಳು ಪ್ರವಚನ ನೀಡಿದರು. ಉಳ್ಳವರು ಬಡವರಿಗೆ ಶಕ್ತಾನುಸಾರ ದಾನ ನೀಡಿದರು. ಇನ್ಸ್‌ಪೆಕ್ಟರ್ ಶಶಿಕುಮಾರ್ ನೇತೃತ್ವದಲ್ಲಿ ಬಿಗಿ ಬಂದೊಬಸ್ತ್ ಮಾಡಲಾಗಿತ್ತು.