

ನಂಜನಗೂಡು: ನಗರದ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿರುವ ಯೋಗ ಮಹಾಮನೆಯಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ನಂಜನಗೂಡು ಯೋಗ ಫೌಂಡೇಶನ್ ಆಶ್ರಯದಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಶನಿವಾರ ನೂರಾರು ಯೋಗಾಸಕ್ತರು ಸಾಮೂಹಿಕ ಯೋಗಾಭ್ಯಾಸ ಮಾಡಿದರು.
ಸಮಿತಿಯ ಪ್ರಧಾನ ಯೋಗ ಶಿಕ್ಷಕ ಪ್ರಕಾಶ್ ಜಿ.ಉಡಿಗಾಲ ಅವರ ಮಾರ್ಗದರ್ಶನದಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ಶಿಷ್ಟಾಚಾರದಂತೆ ಆಸನ, ಪ್ರಾಣಾಯಾಮ ಹಾಗೂ ಧ್ಯಾನವನ್ನು ಮಾಡುವ ಮೂಲಕ ವಿಶ್ವ ಯೋಗ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕಾರ್ಯದರ್ಶಿ ಎನ್.ಆರ್.ಗಣೇಶ್‌ಮೂರ್ತಿ ಮಾತನಾಡಿ, ಈ ಬಾರಿ ವಿಶ್ವಸಂಸ್ಥೆಯು ಒಂದು ಭೂಮಿ, ಒಂದು ಆರೋಗ್ಯ ಧ್ಯೇಯದಡಿ ಇಡೀ ವಿಶ್ವದೆಲ್ಲೆಡೆ ಯೋಗ ಆಚರಿಸುತ್ತಿರುವುದು ಪ್ರಸ್ತುತ ದಿನಮಾನಕ್ಕೆ ಬಹಳ ಸೂಕ್ತವಾಗಿದೆ. ವಿಶ್ವದಲ್ಲಿ ನಡೆಯುತ್ತಿರುವ ತಲ್ಲಣ ಹಾಗೂ ಆತಂಕಕಾರಿ ಬೆಳವಣಿಗೆಗಳಿಂದ ಶಾಂತಿ, ನೆಮ್ಮದಿ, ಆರೋಗ್ಯಕ್ಕೆ ಧಕ್ಕೆ ಆಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ವಿಶ್ವವೆಲ್ಲ ಒಂದು, ಇರುವುದೊಂದೇ ಆರೋಗ್ಯ ಎಂಬ ಸೂಕ್ಷ್ಮತೆ ಬಗ್ಗೆ ಇಡೀ ವಿಶ್ವಕ್ಕೆ ಅರಿವು ಮೂಡಿಸುವ ನಿಟ್ಟಿನಲ್ಲಿ ಯೋಗ ದಿನಾಚರಣೆ ಈ ಬಾರಿ ಮಾದರಿಯಾಗಲಿದೆ ಎಂದರು.
ದೇಹಕ್ಕೆ ಆರೋಗ್ಯ, ಮನಸ್ಸಿಗೆ ಶಾಂತಿ ಸಮಾಧಾನ ಇಂದಿನ ಅಗತ್ಯವಾಗಿದೆ. ವೇಗವಾಗಿ ಓಡುತ್ತಿರುವ ಪ್ರಪಂಚದಲ್ಲಿ ನಾವು ನಮ್ಮ ತನವನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಪೂರ್ವಿಕರು ಹಾಕಿಕೊಟ್ಟ ಯೋಗ, ಧ್ಯಾನ, ಆಧ್ಯಾತ್ಮ ನಮ್ಮ ಬದುಕಿನ ಅಡಿಗಲ್ಲಾಗಬೇಕು. ಆಗಮಾತ್ರ ನೆಮ್ಮದಿದಾಯಕ ಜೀವನ ನಮ್ಮದಾಗಿಸಿಕೊಳ್ಳಬಹುದಾಗಿದೆ. ಈ ದಿಶೆಯಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯು ಉಚಿತವಾಗಿ ಯೋಗ ಶಿಕ್ಷಣವನ್ನು ಹಲವಾರು ದಶಕಗಳಿಂದ ನಾಡಿನಾದ್ಯಂತ ನೀಡುತ್ತಿದೆ ಎಂದು ತಿಳಿಸಿದರು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಅಧ್ಯಕ್ಷ ಆರ್.ವಿ.ರೇವಣ್ಣ, ನಂಜನಗೂಡು ಯೋಗ ಫೌಂಡೇಶನ್ ಗೌರವಾಧ್ಯಕ್ಷ ಹಂಡುವಿನಹಳ್ಳಿ ರಾಜು, ಅಧ್ಯಕ್ಷ ಡಿಗ್ಗೇನಹಳ್ಳಿ ಪ್ರಕಾಶ್ ಸೇರಿದಂತೆ ಯೋಗಾಸಕ್ತರು ಇದ್ದರು.