

ಕಳಸ: ಗದ್ದೆ ಕೆಲಸಕ್ಕೆ ಜನ ಸಿಗೋದಿಲ್ಲ, ಬೆಳೆಯುವ ಭತ್ತಕ್ಕೆ ತಕ್ಕಂತೆ ಬೆಲೆ ಇಲ್ಲ. ಪ್ರಾಣಿಗಳ ಕಾಟದಿಂದ ಬೆಳೆದ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತೋಟಗಾರಿಕೆ ಬೆಳೆಯಲ್ಲಿ ಹೆಚ್ಚಿನ ಲಾಭ ಸಿಗುತ್ತದೆ. ಹೀಗೆ ಇತ್ಯಾದಿ ಕಾರಣಗಳಿಂದ ಗದ್ದೆಗಳನ್ನು ಹಾಳು ಬಿಡುತ್ತಿರುವ ಸನ್ನಿವೇಶಗಳು ಒಂದೆಡೆಯಾದರೆ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸುಮಾರು 500 ಜನರಿಗೂ ಮಿಕ್ಕಿ ಗದ್ದೆ ನಾಟಿ ಮಾಡುವ ಅಪರೂಪದ ಸನ್ನಿವೇಶವನ್ನೂ ಕಾಣಬಹುದು.
ಐತಿಹಾಸಿಕ ಹಿನ್ನೆಲೆ ಇರುವ ಹೊರನಾಡು ಗ್ರಾಮದ ದೊಡ್ಮನೆ ರಾಜೇಂದ್ರ ಪ್ರಸಾದ್ ಹೆಗ್ಗಡೆ ಅವರ ಗದ್ದೆಯಲ್ಲಿ ಭಾನುವಾರ 500 ಜನರಿಗೂ ಹೆಚ್ಚು ಕೃಷಿಕರು ಗದ್ದೆ ನಾಟಿ ಮಾಡುವ ದೃಶ್ಯ ಕಂಡುಬಂತು.
ಗದ್ದೆಯಲ್ಲಿ ಕೃಷಿ ಹಬ್ಬದ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ತಂಡೋಪ ತಂಡವಾಗಿ ಬಂದ ಕೃಷಿಕರು ಗದ್ದೆಗಿಳಿದು ನಾಟಿ ಮಾಡುವುದನ್ನು ನೋಡುವುದೇ ಆನಂದ. ಹೆಂಗಸರು ಹಾಡು, ಕಥೆಗಳನ್ನು ಹೇಳುತ್ತ ಗದ್ದೆ ನಾಟಿ ಮಾಡುವುದು ಕಂಡು ಬಂದರೆ, ಪುರುಷರು ಮಾತನಾಡುತ್ತ, ಮಕ್ಕಳು ಕೆಸರಿನಲ್ಲಿ ಎದ್ದೂಬಿದ್ದು ಆಟವಾಡುತ್ತಿದ್ದರು.
ಗದ್ದೆ ಮಾಲೀಕ ರಾಜೇಂದ್ರ ಪ್ರಸಾದ್ ಹೆಗ್ಗಡೆ ಅವರು ಪ್ರತಿಯೊಬ್ಬರನ್ನೂ ಮಾತನಾಡಿಸಿ ಯೋಗಕ್ಷೇಮ ಸಮಚಾರ ವಿಚಾರಿಸುತ್ತಿರುವುದು ಕಂಡುಬಂತು. ಸುತ್ತಮುತ್ತಲ ನೂರಾರು ಗ್ರಾಮಸ್ಥರು ಈ ಅಪರೂಪದ ದೃಶ್ಯ ಕಣ್ತುಂಬಿಸಿಕೊಳ್ಳಲೆಂದೇ ಬಂದಿದ್ದರು. ಬಂದಂಥ ಎಲ್ಲ ಕೃಷಿಕರಿಗೆ ದೊಡ್ಮನೆಯಲ್ಲಿ ಪ್ರಸಾದ, ಊಟೋಪಚಾರ ಮಾಡಿ ಕಳುಹಿಸಿ ಕೊಡಲಾಯಿತು.
ಜಯಪುರದಿಂದ ಬಂದಿದ್ದ ಹಿರಿಯರೊಬ್ಬರನ್ನು ಮಾತನಾಡಿಸಿದಾಗ, ನಾನು ಹಿಂದಿನಿಂದಲೂ ಇಲ್ಲಿಯ ಗದ್ದೆ ನಾಟಿಗೆ ಬಂದು ಸೇವೆ ಮಾಡಿ ಹೋಗುತ್ತಿದ್ದೇನೆ. ನಾನು ಗದ್ದೆ ನಾಟಿ ಮಾಡುತ್ತಿದ್ದೆ. ಈಗ ವಯಸ್ಸಾಗಿದ್ದರಿಂದ ಗದ್ದೆಗೆ ಇಳಿಯಲು ಆಗುತ್ತಿಲ್ಲ. ಆದರೂ ಎರಡು ಸಸಿ ನೆಟ್ಟು ಹೋಗಲು ಬಂದಿದ್ದೇನೆ. ಇಲ್ಲಿಗೆ ಬಂದು ಗದ್ದೆ ಸಸಿ ನೆಡುವುದೇ ಪುಣ್ಯದ ಕೆಲಸ ಎಂದರು. ಮಹಿಳೆಯೊಬ್ಬರು ಮಾತನಾಡಿ, ಬಸರೀಕಟ್ಟೆಯಿಂದ ಬಂದಿದ್ದೇನೆ. 15 ವರ್ಷಗಳಿಂದ ಬಂದು ಸೇವೆ ಮಾಡಿ ಹೋಗುತ್ತಿದ್ದೇನೆ. ಈ ಬಾರಿ ಕುಟುಂಬ ಸಹಿತ ಬಂದಿದ್ದೇನೆ ಎಂದು ತಿಳಿಸಿದರು.
ಹೊರನಾಡು ದೊಡ್ಮನೆ ಗದ್ದೆ ನಾಟಿ ಮಾಡುವ ದಿನ ಗೊತ್ತುಪಡಿಸಿದ ಕೂಡಲೇ ಊರೆಲ್ಲ ಸುದ್ದಿಯಾಗುತ್ತದೆ. ಕಳಸ, ಮೂಡಿಗೆರೆ,ಬೇಲೂರು, ಬಸರೀಕಟ್ಟೆ, ಜೈಪುರ, ಕೊಪ್ಪ, ಶೃಂಗೇರಿ, ಬಲಿಗೆ, ಹೊರನಾಡು ಮುಂತಾದ ಕಡೆಗಳಿಂದ ತಂಡೋಪ ತಂಡವಾಗಿ ಮಹಿಳೆಯರು,ಪುರುಷರು, ಮಕ್ಕಳು ಬಂದು ಗದ್ದೆ ಸಸಿ ನೆಡುವ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಇಲ್ಲಿನ ಗದ್ದೆಗೆ ಐತಿಹಾಸಿಕ ಹಿನ್ನ್ನೆಲೆ ಇರುವುದರಿಂದ ಗದ್ದೆ ನಾಟಿ ಮಾಡುವ ಮೊದಲು ಕೆಲವೊಂದು ಪೂಜೆ ನೆರವೇರಿದ ಬಳಿಕ ಗದ್ದೆಗೆ ಇಳಿಯಲಾಗುತ್ತದೆ. ಗದ್ದೆ ಹದ ಮಾಡಲು ಕೋಣ, ಎತ್ತುಗಳನ್ನೇ ಬಳಸಲಾಗುತ್ತದೆ. ಇದಕ್ಕೆ ಯಾವುದೇ ಸಂಭಾವನೆ ತೆಗೆದುಕೊಳ್ಳದೆ ಸ್ವಯಂ ಪ್ರೇರಿತವಾಗಿ ಬಂದು ಗದ್ದೆ ಹದ ಮಾಡುತ್ತಾರೆ. ನಂತರ ಮಹಿಳೆಯರು, ಪುರುಷರು, ಮಕ್ಕಳು ಭತ್ತದ ಸಸಿ ನೆಡುವ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಇವರಿಗೆ ದೊಡ್ಮನೆಯಿಂದ ಕಾಫಿ, ತಿಂಡಿ ಊಟೋಪಚಾರದ ವ್ಯವಸ್ಥೆ ಮಾಡಲಾಗುತ್ತದೆ.