ತಿಂಗಳಿಗೆ ಒಂದು ದಿನ ಗಡಿಗ್ರಾಮಗಳಲ್ಲಿ ಜನಸಂಪರ್ಕ ಸಭೆ

15adarshkdga7
Published on

ಮಡಿಕೇರಿ: ಸರ್ಕಾರ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತಿಂಗಳಿಗೆ ಒಂದು ದಿನ ಗಡಿಗ್ರಾಮಗಳಲ್ಲಿ ಜನಸಂಪರ್ಕ ಸಭೆಯನ್ನು ಹಮ್ಮಿಕೊಂಡಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದರು.

ಜಿಲ್ಲೆಯ ಗಡಿಗ್ರಾಮ ಶಿರಂಗಾಲದಲ್ಲಿ ಶನಿವಾರ ಕಂದಾಯ ಇಲಾಖೆ ವ್ಯಾಪ್ತಿಗೆ ಸಂಬಂಧಿಸಿದಂತೆ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಬಗೆಹರಿಸಬಹುದಾದ ಸಮಸ್ಯೆಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರಸೆ ನೀಡಿದರು.

ಜಿಲ್ಲೆಯಲ್ಲಿ ಎರಡು ವರ್ಷದಲ್ಲಿ ಪ್ರವಾಹ, ಭೂ ಕುಸಿತದಿಂದಾಗಿ ಸಾಕಷ್ಟು ಆಸ್ತಿ ಪಾಸ್ತಿ ಹಾನಿಯಾಗಿದೆ. ಇದರಿಂದ ಜನರು ಮನೆ ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. 2018ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ಮನೆ ಹಸ್ತಾಂತರ ಪ್ರಕ್ರಿಯೆ ನಡೆದಿದೆ. ಹಾಗೆಯೇ 2019ರಲ್ಲಿ ಸಂಭವಿಸಿದ ಪ್ರವಾಹ ಹಾಗೂ ಭೂ ಕುಸಿತದಿಂದ ಸಂತ್ರಸ್ತರಾದವರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ನಿವೇಶನ ಹಂಚಿಕೆಗೆ ಕ್ರಮ:
ಜಿಲ್ಲೆಯಲ್ಲಿ ಪ್ರಮುಖವಾಗಿ ನಿವೇಶನಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಸಮರ್ಪಕವಾಗಿ ಅರ್ಹ ಬಡವರಿಗೆ ನಿವೇಶನ ಹಂಚಿಕೆ ಮಾಡಿದ್ದಲ್ಲಿ ಸಮಸ್ಯೆಯನ್ನು ಸ್ವಲ್ಪಮಟ್ಟಿಗಾದರೂ ಬಗೆಹರಿಸಿದಂತಾಗುತ್ತದೆ. ಅರಣ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಮಸ್ಯೆಗಳಿದ್ದು, ಇವುಗಳನ್ನು ಕಾನೂನು ಪ್ರಕಾರ ಪರಿಹರಿಸಲು ಪ್ರಯತ್ನಿಸಲಾಗುವುದು. ಸದ್ಯ ಕಂದಾಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲಾಗುವುದು ಎಂದರು.

ತಿಂಗಳೊಳಗೆ ಅರ್ಜಿ ವಿಲೇವಾರಿ:
ಗ್ರಾಮ ಸಂಪರ್ಕ ಸಭೆಯಲ್ಲಿ ಸ್ವೀಕೃತವಾಗಿರುವ ಅರ್ಜಿಗಳನ್ನು ಒಂದು ತಿಂಗಳ ಒಳಗೆ ವಿಲೇವಾರಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಹಾಗೂ ಇದಕ್ಕೆ ಸಂಬಂಧಿಸಿದಂತೆ ಮುಂದಿನ ತಿಂಗಳ ಮೂರನೇ ಶುಕ್ರವಾರದಂದು ಕಂದಾಯ ಅಧಿಕಾರಿಗಳೊಂದಿಗೆ ಪ್ರಗತಿಯ ಕುರಿತು ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ನೀರನ್ನು ಒದಗಿಸಲು ಮನವಿ:
ಸಾರ್ವಜನಿಕರು ಬೇಸಿಗೆಯಲ್ಲಿ ಭತ್ತ ಬೆಳೆಯಲು ಹಾಗೂ ಇತರ ಕೃಷಿ ಚಟುವಟಿಕೆಗಳಿಗೆ ತೊರೆನೂರು, ಹೆಬ್ಬಾಲೆ, ಶಿರಂಗಾಲ ವ್ಯಾಪ್ತಿಗೆ ಹಾರಂಗಿ ಜಲಾಶಯದಿಂದ ನೀರನ್ನು ಒದಗಿಸಬೇಕು. ವರ್ಷದಲ್ಲಿ ಎರಡು ಬೆಳೆ ಬೆಳೆಯಲು ಅನುಕೂಲ ಮಾಡಿಕೊಡಬೇಕಾಗಿ ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಇದಕ್ಕೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಭೂ ಪರಿವರ್ತನೆಗೆ ಸಂಬಂಧಿಸಿದ ಅಹವಾಲುಗಳನ್ನು ಆಲಿಸಿ ಮಾತನಾಡಿದ ಜಿಲ್ಲಾಧಿಕಾರಿ, ಭೂ ಕುಸಿತ ಸಂಭವವಿರುವ ಜಾಗಗಳನ್ನು ಹೊರತುಪಡಿಸಿ ಭೂ ಪರಿವರ್ತನೆ ಮಾಡಲು ಸರ್ಕಾರದಿಂದ ಆದೇಶವಾಗಿದ್ದು, ಭೂ ಪರಿವರ್ತನೆಗೆ ಅವಕಾಶ ಕಲ್ಪಿಸಲಾಗುವುದು. ಶಿರಂಗಾಲ ವ್ಯಾಪ್ತಿಯಲ್ಲಿ ಭೂಪರಿವರ್ತನೆಗೆ ಯಾವುದೇ ಸಮಸ್ಯೆ ಇಲ್ಲ ಎಂಬ ತೀರ್ಮಾನ ತೆಗೆದುಕೊಂಡಿದ್ದೇವೆ. ಜಮ್ಮಾ ಬಾಣೆ ಸಮಸ್ಯೆ ಇತ್ಯರ್ಥ ಪಡಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಶಿರಂಗಾಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಶಿರಂಗಾಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪೂರ್ಣಾವಧಿ ಪ್ರಯೋಗ ಶಾಲೆ ಸಹಾಯಕರನ್ನು ನೇಮಕ ಮಾಡಬೇಕು. ಶಿರಂಗಾಲ ಮಹಿಳಾ ಸಂಘಕ್ಕೆ ಸೂಕ್ತ ಕಟ್ಟಡ ಒದಗಿಸಿಕೊಡಬೇಕು. ಮತ್ತು ದಲಿತರಿಗೆ ಸ್ಮಶಾನ ಜಾಗ ಗುರುತಿಸಬೇಕು ಎಂದರು.

ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಮಾತನಾಡಿ, ಜನಸಂಪರ್ಕ ಸಭೆಯಲ್ಲಿ ಕಂದಾಯಕ್ಕೆ ಸಂಬಂಧಿಸಿದಂತೆ ಅರ್ಜಿಗಳನ್ನು ಸ್ವೀಕರಿಸಿ, ಪರಿಹರಿಸಲು ಪ್ರಯತ್ನಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಪರಿಹರಿಸುವ ಕೆಲಸಗಳನ್ನು ತ್ವರಿತವಾಗಿ ಬಗೆಹರಿಸಲಾಗುವುದು ಎಂದು ಹೇಳಿದರು.

ಜನಸಂಪರ್ಕ ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳಿಗೆ ವೃದ್ಧಾಪ್ಯ ವೇತನ ಮಂಜೂರಾತಿ ಪತ್ರವನ್ನು ನೀಡಲಾಯಿತು. ತಹಸೀಲ್ದಾರ್ ಗೋವಿಂದರಾಜು, ಶಿರಂಗಾಲ ಗ್ರಾ.ಪಂ.ಅಧ್ಯಕ್ಷ ಮಂಜುನಾಥ್, ತಾ.ಪಂ. ಸದಸ್ಯ ಜಯಣ್ಣ, ಶಿರಂಗಾಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ್, ಜಿ.ಪಂ. ಮಾಜಿ ಅಧ್ಯಕ್ಷ ಅಶೋಕ್, ಭೂ ದಾಖಲೆಗಳ ಉಪ ನಿರ್ದೇಶಕ ಶ್ರೀನಿವಾಸ್, ಸೋಮವಾರಪೇಟೆ ತಾ.ಪಂ.ಇಒ ಸುನಿಲ್ ಕುಮಾರ್, ಕಂದಾಯ ಅಧಿಕಾರಿಗಳು ಇತರರು ಇದ್ದರು.

ಸಭೆಯಲ್ಲಿ ಮನವಿ
ಸಾರ್ವಜನಿಕ ರಸ್ತೆಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಈಗಾಗಲೇ ಅದು ಹಾರಂಗಿ ಇಲಾಖೆಗೆ ಸೇರಿದುದಾಗಿದೆ. ಇದರಿಂದ ಮುಂದೆ ಹೋಗಲು ಹಾಗೂ ಜನರಿಗೆ ಓಡಾಡಲು ಸಮಸ್ಯೆಯಾಗಿದೆ. 7-8 ಎಕರೆ ಜಮೀನು ಒತ್ತುವರಿಯಾಗಿದೆ. ಆದರಿಂದ ಸ್ಥಳ ಪರಿಶೀಲಿಸುವಂತಾಗಬೇಕು. ಖಾಸಗಿಯಾಗಿ 100 ರಿಂದ 150 ಹಂದಿ ಸಾಕಣೆ ಮಾಡುತ್ತಿದ್ದು, ಇದರಿಂದ ಶುಚಿತ್ವಕ್ಕೆ ತೊಂದರೆಯಾಗುತ್ತಿದೆ. ಜನರಿಗೆ ವ್ಯವಸಾಯ ಮಾಡಲು ಕಷ್ಟವಾಗುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು. ಜತೆಗೆ 2 ವರ್ಷದಿಂದ ಗ್ರಾಮ ಪಂಚಾಯತ್‌ನಿಂದ ಒಂದು ಮನೆ ಕೂಡ ಹಂಚಿಕೆಯಾಗಿಲ್ಲ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿ ಗಮನ ಸೆಳೆದರು.

ಎತ್ತಿನ ಗಾಡಿಯಲ್ಲಿ ಮೆರವಣಿಗೆ
ಶಿರಂಗಾಲದಲ್ಲಿ ಜನಸಂಪರ್ಕ ಸಭೆಗೂ ಮೊದಲು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು ಎತ್ತಿನ ಗಾಡಿ ಮೂಲಕ ಮೆರವಣಿಗೆಯಲ್ಲಿ ಆತ್ಮೀಯವಾಗಿ ಬರ ಮಾಡಿಕೊಳ್ಳಲಾಯಿತು.

ಸೊಸೆ ಹಳ್ಳ ನಾಲೆ ವೀಕ್ಷಣೆ
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಉಪ ವಿಭಾಗಾಧಿಕಾರಿಗಳು ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹಾಗೂ ತಹಸೀಲ್ದಾರ್ ಗ್ರಾಮಸ್ಥರೊಂದಿಗೆ ಸೊಸೆ ಹಳ್ಳ ನಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.

ಹೂಳುತುಂಬಿ ಸಂಪೂರ್ಣ ಹಾಳಾಗಿರುವುದರಿಂದ ಈ ನಾಲೆಯನ್ನು ಅಭಿವೃದ್ಧಿಪಡಿಸಬೇಕೆಂದು ಗ್ರಾಮಸ್ಥರು ಕೋರಿದರು. ಆಗ ಸ್ಥಳದಲ್ಲಿದ್ದ ಕಾರ್ಯಪಾಲಕ ಇಂಜಿನಿಯರ್‌ಗೆ ಕೂಡಲೇ ಇದರ ಬಗ್ಗೆ ಅಂದಾಜುಪಟ್ಟಿ ತಯಾರಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಶಿರಂಗಾಲ, ತೊರೆನೂರು, ಮಣಜೂರು ವ್ಯಾಪ್ತಿಗೆ 5 ಕಿ.ಮಿ. ಉದ್ದದ 500 ಏಕರೆ ಕೃಷಿ ಪ್ರದೇಶಕ್ಕೆ ನೀರೊದಗಿಸುವ ಸೊಸೆ ನಾಲೆಯನ್ನು ಅಭಿವೃದ್ಧಿ ಪಡಿಸಬೇಕೆಂದು ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಅಹವಾಲು ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net