

ರೋಣ: ಇಂದಿನ ದುಬಾರಿ ದಿನಮಾನಗಳಲ್ಲಿ ಬಡವರಿಗೆ ಮದುವೆಯಂತಹ ವಿಶೇಷ ಸಂದರ್ಭಗಳಲ್ಲಿ ಉಂಟಾಗುವ ಖರ್ಚು ಕುಟುಂಬದ ಸಾಲಕ್ಕೆ ಕಾರಣವಾಗುತ್ತಿದೆ. ಬಡವರು ಸಾಮೂಹಿಕ ವಿವಾಹ ಅವಲಂಬಿತರಾಗಿದ್ದು, ಇದು ಸಾಮಾಜಿಕ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಯೊಂದಿಗೆ ಬಡವರಿಗೆ ವರದಾನವಾಗಿದೆ ಎಂದು ರೋಣ ಶಾಸಕ ಹಾಗೂ ಕರ್ನಾಟಕ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.
ತಾಲೂಕಿನ ಕೊತಬಾಳ ಗ್ರಾಮದ ಅಂಕಲಗಿ ಅಡವಿ ಸಿದ್ಧೇಶ್ವರ ಮಠದ ಜಾತ್ರಾಮಹೋತ್ಸವ ಹಾಗೂ ರಾಜಶೇಖರ ಶಿವಯೋಗಿಗಳ 24ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಗುರುವಾರ ಜರುಗಿದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗುಳೇದಗುಡ್ಡ ಒಪ್ಪತ್ತೇಶ್ವರ ಮಠದ ಒಪ್ಪತ್ತೇಶ್ವರ ಸ್ವಾಮಿಗಳು ಆಶೀರ್ವಚನ ನೀಡಿ, ನವ ದಂಪತಿಗಳು ಸಮಾಜದಲ್ಲಿ ಎಲ್ಲರಿಗೂ ಆದರ್ಶವಾಗಿ ಬಾಳಬೇಕು. ತಂದೆ-ತಾಯಿ, ಅತ್ತೆ-ಮಾವ ಸೇರಿದಂತೆ ಹಿರಿಯರಲ್ಲಿ ಮಮಕಾರ ಹೊಂದಿ ಮುಂದಿನ ಪೀಳಿಗೆಗೆ ಉತ್ತಮ ಸಂಸ್ಕಾರ ಆಚಾರ-ವಿಚಾರಗಳನ್ನು ಹೇಳಿಕೊಡುವ ಮೂಲಕ ಸಮಾಜದಲ್ಲಿ ಸಾತ್ವಿಕತೆ ಮುಂದುವರಿಯುವಂತೆ ಮಾಡಬೇಕು ಎಂದರು.
18 ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು.
ಕೊತಬಾಳದ ಅಂಕಲಗಿ ಅಡವಿ ಸಿದ್ಧೇಶ್ವರ ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ, ಯಲಬುರ್ಗದ ಶ್ರೀಧರ ಮುರಡಿ ಮಠದ ಬಸವಲಿಂಗ ಸ್ವಾಮೀಜಿ, ರೋಣ ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ, ಮಂಗಳೂರಿನ ಅರಳೆಲೆ ಹಿರೇಮಠದ ಸಿದ್ಧಲಿಂಗ ಸ್ವಾಮೀಜಿ, ಕುಕನೂರ ಅನ್ನದಾನೇಶ್ವರ ಮಠದ ಮಹಾದೇವ ಸ್ವಾಮೀಜಿ, ಬಾದಾಮಿ ನವಗ್ರಹ ಹಿರೇಮಠದ ಶಿವಪೂಜಾ ಸ್ವಾಮೀಜಿ, ಗ್ರಾಪಂ ಅಧ್ಯಕ್ಷೆ ಭೀಮವ್ವ ಗುಳಗುಳಿ, ಉಪಾಧ್ಯಕ್ಷ ಹನಮಪ್ಪ ಅಸೂಟಿ, ಈರಣ್ಣ ಯಾಳಗಿ, ಸಿದ್ದಣ್ಣ ಯಾಳಗಿ, ಬಸವರಾಜ ನವಲಗುಂದ, ಮುತ್ತಣ್ಣ ಸಂಗಳದ, ಅಭಿಷೇಕ ನವಲಗುಂದ, ಅಬ್ದುಲಸಾಬ್ ಹೊಸಮನಿ, ಇತರರು ಉಪಸ್ಥಿತರಿದ್ದರು.