ಹೆದ್ದಾರಿಯಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ 12ರಂದು

BasavaJaya Mrutyunjaya Shree
Published on

ಬ್ಯಾಡಗಿ: ತಾಲೂಕು ಮೋಟೆಬೆನ್ನೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ (ಎನ್‌ಎಚ್4) ಜ. 12ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 12 ಗಂಟೆಯವರೆಗೆ 2ಎ ಮೀಸಲಾತಿಗೆ ಒತ್ತಾಯಿಸಿ ಸಾಮೂಹಿಕ ಇಷ್ಟಲಿಂಗ ಪೂಜೆ ಏರ್ಪಡಿಸಲಾಗಿದೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಹೋರಾಟ ಪರಿಗಣಿಸಿ ಹಿಂದಿನ ಮುಖ್ಯಮಂತ್ರಿ 2ಡಿ ಮೀಸಲಾತಿ ನೀಡಿದ್ದು, ಪ್ರಯೋಜನವಾಗಲಿಲ್ಲ. ಸರ್ಕಾರದಿಂದ ಸ್ಪಷ್ಟವಾಗಿ ಅಧಿಸೂಚನೆ ಪ್ರಕಟಿಸಲಿಲ್ಲ. ಚುನಾವಣೆ ಸಂದರ್ಭದಲ್ಲಿ ಅವಸರದ ನಿರ್ಧಾರದಿಂದ ಸರ್ಕಾರ ಹೊರಡಿಸಿದ ಆದೇಶದಿಂದ ಸಮಾಜಕ್ಕೆ ನ್ಯಾಯ ಸಿಕ್ಕಿಲ್ಲ. 2ಡಿ ಮೀಸಲಾತಿ ಬೇಡ. ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸಬೇಕೆಂದು ಪುನಃ ಹೋರಾಟ ನಡೆಸಿದ್ದೇವೆ ಎಂದರು.

ಬೆಳಗಾವಿ ಅಧಿವೇಶನ ವೇಳೆ ನ್ಯಾಯ ಒದಗಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದು, ಶೀಘ್ರದಲ್ಲೆ ಆದೇಶ ಅನುಷ್ಠಾನಕ್ಕೆ ತರುವಂತೆ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದೇವೆ ಎಂದರು.

15 ದಿನಗಳಿಂದ ಎಲ್ಲೆಡೆ ರಾಜ್ಯ ಮುಖಂಡರೊಂದಿಗೆ ಓಡಾಡುತ್ತಿದ್ದೇವೆ. ಎರಡು ದಿನಗಳ ಕಾಲ ತಾಲೂಕಿನ ಹತ್ತಾರು ಗ್ರಾಮಗಳಿಗೆ ಭೇಟಿ ನೀಡಿ ಹೋರಾಟದಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದ್ದೇವೆ. ಯಾವುದೇ ಪಕ್ಷದ ವಿರುದ್ಧವಾಗಲಿ, ಸಮಾಜದ ವಿರುದ್ಧವಾಗಲಿ ಹೋರಾಟ ಮಾಡುತ್ತಿಲ್ಲ. ನ್ಯಾಯಬದ್ಧ ಮೀಸಲಾತಿ ಪಡೆಯಲು ಸಮಾಜದವರೆಲ್ಲ ಪಕ್ಷಾತೀತವಾಗಿ ಹೋರಾಟ ನಡೆಸುತ್ತಿದ್ದೇವೆ ಎಂದರು.

ಜ. 12ರಂದು ಹೆದ್ದಾರಿ ಸಂಚಾರ ತಡೆ ಹೋರಾಟದಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಶಾಸಕ ಬಸನಗೌಡ ಯತ್ನಾಳ, ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ವಿರೋಧ ಪಕ್ಷ ಉಪನಾಯಕ ಅರವಿಂದ ಬೆಲ್ಲದ, ಇತರರು ಪಾಲ್ಗೊಳ್ಳಲಿದ್ದು, ಬೇರೆ ಬೇರೆ ಜಿಲ್ಲೆಗಳಿಂದ ಅತ್ಯಧಿಕ ಜನ ಸೇರಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ವೀರಶೈವ ಪಂಚಮಸಾಲಿ ಸಮಾಜದ ಘಟಕದ ಕಾರ್ಯದರ್ಶಿ ಸಿ.ಆರ್. ಬಳ್ಳಾರಿ, ತಾಲೂಕು ಘಟಕದ ಸಂಚಾಲಕ ಎಸ್.ಬಿ. ಲಕ್ಕಣ್ಣವರ, ಮುರಡೆಪ್ಪ ಹೆಡಿಯಾಲ, ಶಂಭಣ್ಣ ಮಲಗಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net