ಸಾಮೂಹಿಕ ಗಣಪತಿ ಮೂರ್ತಿಗಳ ವಿಸರ್ಜನೆ ವಿಜೃಂಭಣೆ

04 NMG 01
Published on

ನಾಗಮಂಗಲ: ಪಟ್ಟಣದ ಗಣೇಶ ಮೂರ್ತಿಗಳನ್ನು ಗುರುವಾರ ವಿಜೃಂಭಣೆಯಿಂದ ಮೆರವಣಿಗೆ ನಡೆಸಿ ಸಾಮೂಹಿಕವಾಗಿ ವಿಸರ್ಜನೆ ಮಾಡಲಾಯಿತು. ಕಳೆದ ವರ್ಷ ಸೆ.11ರಂದು ಗಣೇಶಮೂರ್ತಿ ವಿಸರ್ಜನೆ ವೇಳೆ ಗಲಭೆ ನಡೆದು ಸಾಕಷ್ಟು ವಿವಾದವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಹಿಂದು ಸಂಘಟನೆಗಳು ಮುಂದಾಳತ್ವದಲ್ಲಿ ಪಟ್ಟಣ ವ್ಯಾಪ್ತಿಯ 11 ಗಣಪತಿ ಮೂರ್ತಿಗಳನ್ನು ಸಾಮೂಹಿಕವಾಗಿ ಮೆರವಣಿಗೆ ಮೂಲಕ ತೆರಳಿ ವಿಸರ್ಜನೆ ಮಾಡಲಾಯಿತು. ವಿವಿಧ ಕಲಾ ತಂಡಗಳ ಕಲಾಪ್ರದರ್ಶನ ಮೂಲಕ ಅದ್ದೂರಿಯಾಗಿ ಮೆರವಣಿಗೆಯಲ್ಲಿ ಸಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾವಿರಾರು ಸಂಖ್ಯೆಯ ಹಿಂದು ಕಾರ್ಯಕರ್ತರ ಜಯಘೋಷಗಳೊಂದಿಗೆ ಸಾಗಿ ಹಂಪೆ ಅರಸನಕೊಳದಲ್ಲಿ ವಿಸರ್ಜನೆಗೊಂಡವು.

ಸಾಮೂಹಿಕ ಗಣೇಶ ಮೂರ್ತಿಗಳ ಮೆರವಣಿಗೆಗೆ ಪಟ್ಟಣದ ಟಿಬಿ ಬಡಾವಣೆಯ ಗಣೇಶ ದೇವಾಲಯದ ಮುಂದೆ ಸಚಿವ ಎನ್.ಚಲುವರಾಯಸ್ವಾಮಿ ಪುತ್ರ ಸಚಿನ್ ಚಲುವರಾಯಸ್ವಾಮಿ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಪೊಲೀಸ್ ಇಲಾಖೆಯಿಂದ ಪೂರ್ವಾನುಮತಿ ಪಡೆದಂತೆ ಪಟ್ಟಣದ ಟಿಬಿ ಬಡಾವಣೆಯ ಬಿಜಿಎಸ್ ವೃತ್ತದಿಂದ ಚಾಮರಾಜನಗರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆರವಣಿಗೆ ಸಾಗಿ ಮಂಡ್ಯ ಸರ್ಕಲ್ ತಲುಪಿ ನಂತರ ಯೂಟರ್ನ್ ಪಡೆದು ಟಿ.ಮರಿಯಪ್ಪ ವೃತ್ತದ ಮೂಲಕ ಶ್ರೀ ಸೌಮ್ಯಕೇಶವಸ್ವಾಮಿ ದೇವಾಲಯದ ರಸ್ತೆಯ ಮೂಲಕ ಪಡುವಲಪಟ್ಟಣ ರಸ್ತೆ, ಸರ್ಕಲ್ ಮಾರಮ್ಮ ವೃತ್ತ, ಬಡಗೂಡಮ್ಮದೇವಿ ಸರ್ಕಲ್ ಮೂಲಕ ತೆರಳಿ ಗಾಣಿಗರ ಬೀದಿಯನ್ನು ತಲುಪಿ ನಂತರ ಹಂಪೆ ಅರಸನ ಕೊಳದಲ್ಲಿ ವಿಸರ್ಜನೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net