ಸಾಮೂಹಿಕ ಅಗ್ನಿಹೋತ್ರ 13ರಂದು

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಯುನಿವರ್ಸಲ್​ ನಾಲೆಡ್ಜ್​ ಟ್ರಸ್ಟ್​ನ ಗ್ರಾಮ ವಿಕಾಸ ಸಂಸ್ಥೆಯ ಕರ್ನಾಟಕ ಅಗ್ನಿಹೋತ್ರ ವತಿಯಿಂದ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಏ. 13ರಂದು ಬೆಳಗ್ಗೆ 10.30ರಿಂದ ಹು-ಧಾ ಬೈಪಾಸ್​ ರಸ್ತೆಯ ಮನಸೂರ ಬಳಿಯ ಅಗ್ನಿಹೋತ್ರ ಸಂಶೋಧನೆ ಕೇಂದ್ರದ ಇಂಡಿಗೋ ಕ್ಯಾಂಪಸ್​ನಲ್ಲಿ ಸಾಮೂಹಿಕ ಅಗ್ನಿಹೋತ್ರ ಕಾರ್ಯಕ್ರಮ ಆಯೋಜಿಸಲಾಗಿದೆ.

ಅಂದು 11,111ಕ್ಕೂ ಹೆಚ್ಚು ಜನರಿಂದ ಸಾಮೂಹಿಕ ಅಗ್ನಿಹೋತ್ರ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 10.30ಕ್ಕೆ ನೋಂದಣಿ, 11ಕ್ಕೆ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ, ಮಧ್ಯಾಹ್ನ 12 ಗಂಟೆಗೆ ಜಯತ್​ ಹಾಗೂ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಮಧ್ಯಾಹ್ನ 1.45ಕ್ಕೆ ದೇವರ ಹುಬ್ಬಳ್ಳಿಯ ಶ್ರೀ ಸಿದ್ಧಶಿವಯೋಗಿ ಸ್ವಾಮೀಜಿ, ಚಿತ್ರದುರ್ಗದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಕುಂದಗೋಳದ ಶ್ರೀ ಬಸವಣ್ಣಜ್ಜನವರ ಸ್ವಾಮೀಜಿ, ನಿಡಸೋಸಿಯ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್​ ಅಧ್ಯಕ್ಷತೆ ವಹಿಸುವರು. ವಿಧಾನಸಭಾಧ್ಯಕ್ಷ ಯು.ಟಿ. ಖಾದರ, ಸಭಾಪತಿ ಬಸವರಾಜ ಹೊರಟ್ಟಿ, ಸಂಸದರಾದ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್​, ಮಾಜಿ ಸಚಿವ ಮುರಗೇಶ ನಿರಾಣಿ, ಶಾಸಕ ಅರವಿಂದ ಬೆಲ್ಲದ, ರೇವತಿ ಕಾಮತ್​, ರಾಜ್ಯಸಭಾ ಮಾಜಿ ಸದಸ್ಯ ಡಾ. ಪ್ರಭಾಕರ ಕೋರೆ, ಆರ್​ಎಸ್​ಎಸ್​ನ ಶ್ರೀಧರ ನಾಡಿಗೇರ, ಮಜೇತಿಯಾ ಪ್ರತಿಷ್ಠಾನದ ಸಂಸ್ಥಾಪಕ ಜಿತೇಂದ್ರ ಮಜೇತಿಯಾ, ಇತರರು ಭಾಗವಹಿಸಲಿದ್ದಾರೆ.

ಸಂಜೆ 6.30 ರಿಂದ 6.44ರವರೆಗೆ ಸಾಮೂಹಿಕ ಅಗ್ನಿಹೋತ್ರ ಕಾರ್ಯಕ್ರಮ ಹಾಗೂ 6.45ಕ್ಕೆ ಸಾಮೂಹಿಕ ಧ್ಯಾನ ನಡೆಯಲಿದೆ. ಈಗಾಗಲೇ 30 ಜಿಲ್ಲೆಗಳ 20 ಸಾವಿರ ಜನರಿಗೆ ಅಗ್ನಿಹೋತ್ರ ಬಗ್ಗೆ ಅರಿವು ಮೂಡಿಸಲಾಗಿದೆ. 11,111 ಜನರಿಗೆ ಅಗ್ನಿಹೋತ್ರದ ಕಿಟ್​ ವಿತರಿಸಲಾಗಿದೆ. ಮನೆಗಳಲ್ಲಿ ಅಗ್ನಿಹೋತ್ರ ಮಾಡುವುದರಿಂದ ಆರ್ಥಿಕ ಪರಿಸ್ಥಿತಿ, ಸಂಬಂಧಗಳ ಸ್ಥಿತಿ ಸುಧಾರಿಸುತ್ತದೆ. ಅಗ್ನಿಹೋತ್ರದ ಬೂದಿಯನ್ನು ಹೊಲಗಳಿಗೆ ಹಾಕಿದರೆ ಕೃಷಿ ಉತ್ಪಾದನೆ ದುಪ್ಪಟ್ಟು ಆಗಲಿದೆ ಎಂದು ಕಾರ್ಯಕ್ರಮದ ಮುಖ್ಯ ಆಯೋಜಕ ಜಗದೀಶ ನಾಯಿಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net