ಹಕ್ಕುಪತ್ರ ನೀಡದಿದ್ದರೆ ಚುನಾವಣೆ ಬಹಿಷ್ಕಾರ

16-msk-2
Published on

ಮಸ್ಕಿ: ಮತದಾನ ಸಂವಿಧಾನ ಬದ್ಧ ಹಕ್ಕು. ಅದರಿಂದ ಯಾರೂ ದೂರ ಉಳಿಯಬಾರದು ಎಂದು ತಹಸೀಲ್ದಾರ್ ಅರಮನೆ ಸುಧಾ ಹೇಳಿದರು.

ಪಟ್ಟಣದ ಸೋಮನಾಥ ನಗರದ ನಿವಾಸಿಗಳು ಹಕ್ಕುಪತ್ರಕ್ಕಾಗಿ ವಿಧಾನಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಹೇಳಿದ ಹಿನ್ನೆಲೆಯಲ್ಲಿ 2 ಮತ್ತು 12ನೇ ವಾರ್ಡ್‌ನ ಸಮುದಾಯ ಭವನದಲ್ಲಿ ಗುರುವಾರ ಕಂದಾಯ, ನೀರಾವರಿ, ಪುರಸಭೆ, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ನಿವಾಸಿಗಳ ಸಭೆ ನಡೆಸಿದ ಅವರು, ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳುತ್ತೇವೆ. ಆದರೆ ಮತದಾನದಿಂದ ದೂರ ಉಳಿಯಬೇಡಿ ಎಂದು ಮನವಿ ಮಾಡಿದರು.

ಸೋಮನಾಥ ನಗರ ಹಿತರಕ್ಷಣಾ ವೇದಿಕೆಯ ಮುಖಂಡ ಹನುಮಂತಪ್ಪ ವೆಂಕಟಾಪೂರು ಮಾತನಾಡಿ, ಇಲ್ಲಿನ ನೀರಾವರಿ ಇಲಾಖೆಗೆ (ಟಿಬಿಪಿ) ಸೇರಿದ ಜಾಗದಲ್ಲಿ ಕಳೆದ 30 ವರ್ಷಗಳಿಂದ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರು, ಹಿಂದುಳಿದ 500ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿವೆ. ಆದರೆ ಅವರಿಗೆ ಈವರೆಗೆ ಹಕ್ಕುಪತ್ರ ನೀಡಿಲ್ಲ. ಈ ಬಗ್ಗೆ ಹೋರಾಟ ಮಾಡಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಸಾಕಷ್ಟು ಮನವಿ ಸಲ್ಲಿಸಿದರೂ ಕ್ರಮವಾಗಿಲ್ಲ. ಕೆಡಿಪಿ ಸಭೆಗೆ ಮುತ್ತಿಗೆ ಹಾಕಿದ್ದರೂ ಪ್ರಯೋಜನವಾಗಿಲ್ಲ. ಇದರಿಂದ ಬಡಕುಟುಂಬಗಳು ಸೂರಿಲ್ಲದೆ ಬೀಗಿಗೆ ಬರುವಂತಾಗಿದೆ.ಆದ್ದರಿಂದ ಇಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡುವವರೆಗೆ ನಾವು ಮತದಾನ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು.

ಇನ್ನೋರ್ವ ಮುಖಂಡ ಮಲ್ಲಯ್ಯ ಬಳ್ಳಾ ಮಾತನಾಡಿ, ಸರ್ಕಾರ ಕೂಡಲೇ ಸಚಿವ ಸಂಪುಟ ಸಭೆ ಕರೆದು ಚುನಾವಣೆಗೆ ಮುನ್ನವೇ ಹಕ್ಕುಪತ್ರ ನೀಡಬೇಕು. ಇಲ್ಲದಿದ್ದರೆ ಎರಡು ವಾರ್ಡ್‌ಗಳ ಮತದಾರರು ಮತದಾನದಿಂದ ದೂರ ಉಳಿಯುತ್ತಾರೆ. ಅಧಿಕಾರಿಗಳು ಬಡವರ ಕಷ್ಟಕ್ಕೆ ಧಾವಿಸಿ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ, ನೀರಾವರಿ ಇಲಾಖೆಯ ಮಲ್ಲಯ್ಯ, ಸಿಪಿಐ ಸಂಜೀವ್ ಬಳಿಗಾರ್, ಪಿಎಸ್‌ಐ ಸಿದ್ಧರಾಮ ಬಿದರಾಣಿ, ತಾಪಂನ ಪಂಪನಗೌಡ ಪಾಟೀಲ್, ಪುರಸಭೆ ಸದಸ್ಯರಾದ ಸುರೇಶ ಹರಸೂರು, ಮಲ್ಲಯ್ಯ ಅಂಬಾಡಿ, ರಮೇಶ ಗುಡಿಸಲಿ ಹಾಗೂ ನೂರಾರು ಮಹಿಳೆಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net