ಕಾರ್ಯಕರ್ತರಿಗೂ ಅಧಿಕಾರ ಸಿಗಲು ಶ್ರಮಿಸಿ ಎಂದು ಕಿವಿಮಾತು ಹೇಳಿದ ಡಿಸಿಎಂ ಲಕ್ಷ್ಮಣ ಸವದಿ

30112020 Maski BJP Gram Swaraj programe
Published on

ಮಸ್ಕಿ: ಶಾಸಕ, ಸಂಸದರಾಗುವ ಹಿಂದೆ ಬಿಜೆಪಿ ಕಾರ್ಯಕರ್ತರ ಶ್ರಮ ದೊಡ್ಡದು. ಕಾರ್ಯಕರ್ತರಿಗೂ ಅಧಿಕಾರ ಸಿಗುವಂತೆ ಮಾಡಲು ಪಕ್ಷದ ನಾಯಕರು ಶ್ರಮಿಸೋಣ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಬಿಜೆಪಿಯಿಂದ ಆಯೋಜಿಸಿದ್ದ ಲಿಂಗಸುಗೂರು, ಮಸ್ಕಿ ಮತ್ತು ಸಿಂಧನೂರು ಮಂಡಲಗಳ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಡಿ.22 ಮತ್ತು 27 ರಂದು ಗ್ರಾಪಂ ಚುನಾವಣೆ ನಡೆಯಲಿದೆ. ನಾಯಕರಿಗಾಗಿ ದುಡಿದ ಕಾರ್ಯಕರ್ತರನ್ನು ಗುರುತಿಸಿ ಗ್ರಾಪಂಗೆ ಆಯ್ಕೆ ಆಗುವಂತೆ ಮಾಡಲಾಗುವುದು. 31 ಜಿಲ್ಲೆಗಳಲ್ಲಿ ಆರು ತಂಡಗಳಿಂದ 62 ಗ್ರಾಮ ಸ್ವರಾಜ್ಯ ಸಮಾವೇಶ ಮಾಡಿ, ಕಾರ್ಯಕರ್ತರನ್ನು ಅಧಿಕಾರಕ್ಕೆ ತರುವ ಪ್ರಯತ್ನ ಮಾಡಲಾಗುವುದು ಎಂದರು.

ಕ್ಷೇತ್ರದಲ್ಲಿ ನನೆಗುದಿಗೆ ಬಿದ್ದಿರುವ 5ಎ ಕಾಲುವೆ ಮತ್ತು ಕನಕನಾಲಾ ಯೋಜನೆ ಅನುಷ್ಠಾನ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದು. ಈಗಾಗಲೇ ಭತ್ತದ ಬೆಳೆ ನಷ್ಟ ಸಮೀಕ್ಷೆ ಮಾಡಲಾಗುತ್ತಿದೆ. ಈಗಾಗಲೇ ಬೆಂಬಲ ಬೆಲೆಯನ್ನು ಭತ್ತ ಖರೀದಿಸಲು ಸರ್ಕಾರ ಆದೇಶ ಹೊರಡಿಸಿದೆ ಎಂದರು.

ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಎಸ್‌ಟಿ-ಎಸ್‌ಸಿಗೆ ಮೀಸಲು ಪ್ರಮಾಣ ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ. ಈಗಾಗಲೇ ಉಪ ಸಮಿತಿ ರಚಿಸಲಾಗಿದೆ. ವರದಿ ತಯಾರಿಸಿ, ಸರ್ಕಾರಕ್ಕೆ ಸಲ್ಲಿಸಿದ ಕೂಡಲೇ ಜಾರಿ ಮಾಡಲಾಗುವುದು. ಮೋದಿ-ಅಮಿತ್ ಶಾ ಆಶಯದಂತೆ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವ ಮೂಲಕ ಕನಾರ್ಟಕದಲ್ಲಿ ಕಾಂಗ್ರೆಸ್ ಮುಕ್ತ ಮಾಡಬೇಕು. ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿ, ಸಚಿವರಾಗುವುದರಲ್ಲಿ ಅನುಮಾನವಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net