

ಮಸ್ಕಿ: ಪಟ್ಟಣದ ಮುಖ್ಯ ಬಜಾರದಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸೋಮವಾರ ಕಾರ್ತಿಕ ದೀಪೋತ್ಸವ ನಡೆಯಿತು. ಬೆಳಗ್ಗೆ ಶ್ರೀ ವೀರಭದ್ರೇಶ್ವರ ವಿಗ್ರಹಕ್ಕೆ ಅಭಿಷೇಕ ಸೇರಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ ನೂರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ದೇವಸ್ಥಾನದಲ್ಲಿ ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯರು ದೀಪ ಬೆಳಗಿಸಿ ಕಾರ್ತಿಕ ದೀಪೋತ್ಸವಕ್ಕೆ ಚಾಲನೆ ನೀಡಿದರು. ನೂರಾರು ಮಹಿಳೆಯರು ಹಣತೆಗೆ ಎಣ್ಣೆ ಹಾಕಿ ದೀಪ ಹಚ್ಚಿದರು. ಶಾಸಕ ಆರ್.ಬಸನಗೌಡ ತುರ್ವಿಹಾಳ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಗ್ರಾಮದ ಮುಖಂಡರಾದ ಕೆ.ವೀರನಗೌಡ, ಮಹಾದೇವಪ್ಪಗೌಡ ಪಾಟೀಲ, ಸಿದ್ದಲಿಂಗಯ್ಯ ಗಚ್ಚಿನಮಠ, ಮಲ್ಲಪ್ಪ ಕುಡತಿನಿ ಇತರರಿದ್ದರು. ಮಸ್ಕಿ ಸಮೀಪದ ಹಳೇ ಕ್ಯಾತ್ನಟ್ಟಿಯಲ್ಲಿ ಶ್ರೀವೀರಭದ್ರೇಶ್ವರ ದೇವರಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಸೇರಿ ವಿಶೇಷ ಪೂಜೆ ನೆರವೇರಿತು. ಮಸ್ಕಿ ಪಟ್ಟಣದ ಕಾಳಿಕ ದೇವಸ್ಥಾನದಲ್ಲಿ ವಿಶ್ವಕರ್ಮ ಸಮುದಾಯದವರು ಕಾರ್ತಿಕ ಮಾಸದ ದೀಪೋತ್ಸವ ಆಚರಿಸಿದರು.