ರೋಷನ್‌ಬೇಗ್‌ಗೂ ಕಾಂಗ್ರೆಸ್‌ಗೂ ಸಂಬಂಧವಿಲ್ಲ ಎಂದ ಸಿದ್ದರಾಮಯ್ಯ

Siddaramaiya
Published on

ಮಸ್ಕಿ: ಐಎಂಎ ಹಗರಣ ಸಂಬಂಧಿಸಿ ಬಂಧನವಾಗಿರುವ ರೋಷನ್‌ಬೇಗ್‌ಗೂ ಮತ್ತು ನಮಗೂ ಸಂಬಂಧವಿಲ್ಲ. ಅವರು ನಮ್ಮ ಪಕ್ಷದಲ್ಲಿಯೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಣಕಾಸಿನ ವಿಚಾರ ಅವರ ವೈಯಕ್ತಿಕಕ್ಕೆ ಸಂಬಂಧಿಸಿದ್ದು, ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿದೆ. ಐಎಂಎ ಹಗರಣದಲ್ಲಿ ಜಮೀರ್ ಅಹ್ಮದ್ ಭಾಗಿಯಾಗಿದ್ದಾರೆನ್ನುವ ಆರೋಪಕ್ಕೆ ಸಂಬಂಧಿಸಿ ಎಸ್‌ಐಟಿ ಈಗಾಗಲೇ ಅವರ ವಿಚಾರಣೆ ನಡೆಸಿದೆ. ವಿಚಾರಣೆ ವೇಳೆ ಹಗರಣದಲ್ಲಿ ತಮ್ಮ ಪಾತ್ರವಿಲ್ಲವೆಂದು ಹೇಳಿದ್ದಾರೆ.

ಕಾಂಗ್ರೆಸ್‌ನಲ್ಲಿ ನಾಯಕತ್ವದ ಗೊಂದಲವಿದೆ ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜನರ ದಾರಿ ತಪ್ಪಿಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಗೊಂದಲವಿಲ್ಲ. ಮಾಜಿ ಶಾಸಕ ಪ್ರತಾಪಗೌಡ ಪಾಟೀಲರು ಸ್ವಾರ್ಥಕ್ಕಾಗಿ ಕಾಂಗ್ರೆಸ್ ಬಿಟ್ಟಿದ್ದಾರೆ. ಈ ಉಪ ಚುನಾವಣೆಯಲ್ಲಿ ಮತದಾರರು ಅವರಿಗೆ ಪಾಠ ಕಲಿಸಲಿದ್ದಾರೆಂಬ ವಿಶ್ವಾವಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಸ್ಕಿ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಿದ್ದೇನೆ. ಅನುದಾನ ನೀಡಿಲ್ಲವೆಂಬ ಪ್ರತಾಪಗೌಡರ ಮಾತು ಸುಳ್ಳು. ಮಸ್ಕಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ. ಬಿಜೆಪಿಯಲ್ಲಿದ್ದ ಬಸನಗೌಡರು ಕಾಂಗ್ರೆಸ್ ಸೇರಿದ್ದಾರೆ. ಚುನಾವಣೆ ಘೋಷಣೆ ನಂತರ ಅಭ್ಯರ್ಥಿ ಘೋಷಣೆ ಮಾಡ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net