ಮಸ್ಕಿ ಕ್ಷೇತ್ರದಲ್ಲಿ ಪ್ರತಾಪಗೌಡ, ಬಸನಗೌಡ ಜೋಡೆತ್ತಿದ್ದಂತೆ ; ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ

07032020 Maski BJP samavesha
Published on

ಮಸ್ಕಿ: ಕ್ಷೇತ್ರದಲ್ಲಿ ಪ್ರತಾಪಗೌಡ ಪಾಟೀಲ ಮತ್ತು ಬಸನಗೌಡ ಸಮ ಎತ್ತುಗಳು. ಬರುವ ಚುನಾವಣೆಯಲ್ಲಿ ಕಮಲ ಅರಳಿಸಿ ಬಿಜೆಪಿ ಶಾಸಕರು ಆಯ್ಕೆಯಾಗುವುದು ಖಚಿತ ಎಂದು ಎಂಎಲ್ಸಿ ಹಾಗೂ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ ಹೇಳಿದರು.

ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಕ್ಷೇತ್ರದ ಬಿಜೆಪಿ ಮಂಡಲ ಅಧ್ಯಕ್ಷರ ಪದಗ್ರಹಣ ಸಮಾರಂಭ ಶನಿವಾರ ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಸ್ಥಿತ್ವ ಇಲ್ಲ, ಅಭ್ಯರ್ಥಿ ಠೇವಣಿ ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ ಎಂದರು.

ಬಿಎಸ್‌ವೈ ನೇತೃತ್ವದ ಸರ್ಕಾರ ರಚನೆಯಾಗುವಲ್ಲಿ ಪ್ರತಾಪಗೌಡ ಪಾಟೀಲ್ ಮೊದಲಿಗರಾಗಿದ್ದಾರೆ. ಅವರ ತ್ಯಾಗವನ್ನು ಪಕ್ಷ ಸದಾ ಸ್ಮರಿಸುತ್ತದೆ. ಮತ್ತೊಮ್ಮೆ ಅವರನ್ನು ಆಯ್ಕೆ ಮಾಡುವ ಜವಾಬ್ದಾರಿ ಬಿಜೆಪಿ ಮೇಲೆ ಇದೆ ಎಂದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ಬಿಜೆಪಿ ಪಕ್ಷ ನಿಷ್ಠೆಯಿಂದ ದುಡಿದವರನ್ನು ಗುರುತಿಸಿ ಅಧಿಕಾರ ನೀಡುವ ನಡೆ ಹಾಕಿಕೊಂಡಿದೆ. ಅಧಿಕಾರ ಕೆಲವೇ ಜನರ ಸ್ವತ್ತಲ್ಲ. ಸಾಮಾನ್ಯ ಕಾರ್ಯಕರ್ತರು ಕೂಡ ಪಕ್ಷದ ಉನ್ನತ ಸ್ಥಾನ ಮಾನ ಪಡೆಯುವ ಅರ್ಹತೆ ಪಡೆಯುತ್ತಾರೆ. ಕ್ಷೇತ್ರದಲ್ಲಿ ಬಿಜೆಪಿ ಬಲವಾಗಿ ಸಂಘಟನೆಯಾಗಿದೆ. ಪ್ರತಿಯೊಬ್ಬರೂ ಬಿಜೆಪಿ ಸಿದ್ಧಾಂತ ಅರಿತುಕೊಳ್ಳಬೇಕು ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥರಡ್ಡಿ ಅಮೀನಗಡ ನೂತನ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ ಅವರಿಗೆ ಪಕ್ಷದ ಬಾವುಟ ನೀಡಿ ಅಧಿಕಾರ ಹಸ್ತಾಂತರ ಮಾಡಿದರು. ತುಂಗಭದ್ರಾ ಕಾಡಾ ಅಧ್ಯಕ್ಷ ಆರ್.ಬಸನಗೌಡ ತುರ್ವಿಹಾಳ, ಬಿಜೆಪಿ ಜಿಲ್ಲಾ ಅಧ್ಯಕ್ಷ ರಮಾನಂದ ಯಾದವ ಮಾತನಾಡಿದರು.

ಮಾಜಿ ಶಾಸಕರಾದ ಮಾನಪ್ಪ ವಜ್ಜಲ, ಬಸನಗೌಡ ಬ್ಯಾಗವಾಟ, ಗಂಗಾಧರ ನಾಯಕ, ಮಾಜಿ ಎಂಎಲ್ಸಿ ಶಶೀಲ ನಮೋಶಿ, ಜಿಪಂ ಅಧ್ಯಕ್ಷೆ ವೀರಲಕ್ಷ್ಮಿ ಹಾದಿಮನಿ, ಬಿಜೆಪಿ ಮಾಜಿ ಅಧ್ಯಕ್ಷ ಶರಣಪ್ಪಗೌಡ ಜಾಡಲದಿನ್ನಿ, ಸಿಂಧನೂರು ನಗರಾಭಿವೃದ್ಧಿ ಅಧ್ಯಕ್ಷ ಅಮರೇಗೌಡ ವಿರುಪಾಪುರ, ಜಿಪಂ ಸದಸ್ಯ ಶಿವನಗೌಡ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅಪ್ಪಾಜಿಗೌಡ, ಸಿಂಧನೂರಿನ ವೀರೇಶ ಇಲ್ಲೂರು, ರಾಯಚೂರಿನ ಶರಣಮ್ಮ ಕಾಮರಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net