

ಮಸ್ಕಿ: ನರೇಗಾ ಕೂಲಿ ಕಾರ್ಮಿಕರ ಹಾಜರಾತಿಗೆ ಸರ್ಕಾರ ಪ್ರತೇಕ ತಂತ್ರಾಂಶ ಅಭಿವೃದ್ಧಿಪಡಿಸಿದೆ ಎಂದು ಐಇಸಿ ಸಂಯೋಜಕ ಜಿ.ಸತೀಶ ತಿಳಿಸಿದರು.
ತಾಲೂಕಿನ ಮೆದಕಿನಾಳ ಗ್ರಾಪಂ ವ್ಯಾಪ್ತಿಯ ಮ್ಯಾದರಾಳದಲ್ಲಿ ಹಮ್ಮಿಕೊಂಡಿದ್ದ ರೋಜ್‌ಗಾರ್ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ಅನೇಕ ದಿನಗಳಿಂದ ಕಾರ್ಮಿಕರ ಹಾಜರಾತಿ ಕುರಿತು ಆರೋಪಗಳು ಕೇಳಿ ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ ಎಂಎಂಎಸ್ ತಂತ್ರಾಂಶ ಅಭಿವೃದ್ಧಿಪಡಿಸಿದೆ. ಅಂತರ್ಜಾಲದ ನೆರವಿನೊಂದಿಗೆ ಜಿಪಿಎಸ್ ಆಧಾರಿತ ಹಾಜರಾತಿ ಜಾರಿಗೆ ಬರಲಿದ್ದು, ಕೆಲಸದ ಸ್ಥಳದಲ್ಲಿ ಕೂಲಿ ಕಾರ್ಮಿಕರ ಮುಖ ಚಹರೆ ಆಧರಿಸಿ ಹಾಜರಾತಿ ದಾಖಲಾಗಲಿದೆ. ಕೆಲಸದ ಅವಧಿ ಮುಗಿಯುವವರೆಗೆ ಕಾರ್ಮಿಕರು ಕಡ್ಡಾಯವಾಗಿ ಕಾಮಗಾರಿ ಸ್ಥಳದಲ್ಲಿರಬೇಕಾಗುತ್ತದೆ. ಬೇಸಿಗೆಯಲ್ಲಿ ಕಾಮಗಾರಿ ಸ್ಥಳದಲ್ಲಿ ನೆರಳು, ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ನಿಗದಿತ ನಮೂನೆಯಲ್ಲಿ ಕಾಮಗಾರಿ ಪೂರ್ಣಗೊಳಿಸಿದಾಗ ಮಾತ್ರ ಸಂಪೂರ್ಣ ಕೂಲಿ ಮೊತ್ತ ಪಾವತಿಯಾಗಲಿದೆ ಎಂದರು.