

ಮಸ್ಕಿ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವೀಸ್ ರಸ್ತೆಯ ಫುಟ್‌ಪಾತ್ ಮೇಲೆ ನಿರ್ಮಿಸಿಕೊಂಡಿರುವ ಗೂಡಂಗಡಿಗಳನ್ನು ಸೆ.5 ರೊಳಗೆ ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ಪುರಸಭೆಯಿಂದಲೇ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಐಎಎಸ್ ಪ್ರೊಬೇಷನರಿ ಅಧಿಕಾರಿ (ಪುರಸಭೆ ಪ್ರಭಾರ ಮುಖ್ಯಾಧಿಕಾರಿ) ಪುರುರಾಜಸಿಂಗ್ ಸೋಲಂಕಿ ತಿಳಿಸಿದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಬೀದಿಬದಿ ವ್ಯಾಪಾರಿಗಳು, ಪುರಸಭೆ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಸರ್ವೀಸ್ ರಸ್ತೆಯಲ್ಲಿ ವಾಹನಗಳು, ಫುಟ್‌ಪಾತ್ ಮೇಲೆ ಪಾದಚಾರಿಗಳು ಸಂಚರಿಸಬೇಕು. ಫುಟ್‌ಪಾತ್‌ನಲ್ಲಿ ದ್ವಿಚಕ್ರ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ.
ಕೂಡಲೇ ಫುಟ್‌ಪಾತ್ ಅತಿಕ್ರಮಿಸಿಕೊಂಡವರು ಸ್ವ ಇಚ್ಛೆಯಿಂದ ತೆರವು ಮಾಡಬೇಕು. ಇಲ್ಲದಿದ್ದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕ್ರಮವಹಿಸಲಾಗುವುದು ಎಂದು ಎಚ್ಚರಿಸಿದುರ. ಹಳೇ ಬಸ್ ನಿಲ್ದಾಣದ ಬಳಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು, ಸುಗಮ ವಾಹನಗಳ ಸಂಚರಿಸಲು ಸಿಬ್ಬಂದಿಯನ್ನು ನಿಯೋಜಿಸುವಂತೆ ಪೊಲೀಸ್ ಅಧಿಕಾರಿಗೆ ಸೂಚಿಸಿದರು.
ನಮಗೆ ವ್ಯಾಪಾರ ಮಾಡಲು ಹಳೇ ಬಸ್ ನಿಲ್ದಾಣದ ಹತ್ತಿರ ಪರ್ಯಾಯ ವ್ಯವಸ್ಥೆ ಮಾಡಿಕೊಡಿ ಎಂದು ಬೀದಿಬದಿ ವ್ಯಾಪಾರಸ್ಥರು ಕೋರಿದರು.
ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಉಪಾಧ್ಯಕ್ಷೆ ಗೀತಾ ಶಿವರಾಜ ಬುಕ್ಕಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಚೇತನ ಪಾಟೀಲ್, ಸಿಪಿಐ ಬಾಲಚಂದ್ರ ಡಿ.ಲಕ್ಕಂ, ಪಿಎಸ್‌ಐ ಕೆ.ರಂಗಯ್ಯ ಹಾಗೂ ಪುರಸಭೆ ಸಿಬ್ಬಂದಿ ಇದ್ದರು.