

ಮಸ್ಕಿ: ಪಟ್ಟಣದ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಆ.28 ರಂದು ನಡೆಯಲಿದೆ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ.
ಅಧ್ಯಕ್ಷ ಸ್ಥಾನ ಬಿಸಿಎ(ಪುರುಷ), ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಪುರಸಭೆಯಲ್ಲಿ ಬಹುಮತ ಹೊಂದಿರುವ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸನ್ನದ್ಧವಾಗಿದೆ.
ಒಟ್ಟು 23 ಸದಸ್ಯರಲ್ಲಿ 14 ಜನ ಬಿಜೆಪಿ ಸದಸ್ಯರು ಮತ್ತು 9 ಜನ ಕಾಂಗ್ರೆಸ್ ಸದಸ್ಯರಿದ್ದಾರೆ. 3ನೇ ವಾರ್ಡ್‌ನ ಮಹಿಳೆ ಕಾಂಗ್ರೆಸ್ ಸದಸ್ಯೆ ನಿಧನರಾಗಿದ್ದರಿಂದ ಕಾಂಗ್ರೆಸ್ 8 ಸ್ಥಾನಕ್ಕೆ ಕುಸಿದಿದೆ. ಅಧಿಕಾರದ ಗದ್ದುಗೆ ಏರಲು ಬಿಜೆಪಿಗೆ ಬಹುಮತ ಸರಳವಾಗಿದ್ದು. ಪುರಸಭೆ ಅಧ್ಯಕ್ಷ ಸ್ಥಾನಕ್ಕೆ 1ನೇ ವಾರ್ಡ್‌ನ ಸದಸ್ಯ ಮಲ್ಲಯ್ಯ ಅಂಬಾಡಿ ಹಾಗೂ 16ನೇ ವಾರ್ಡಿನ ಸದಸ್ಯ ಸುರೇಶ ಹರಸೂರ ಪೈಪೋಟಿ ನಡೆಸುತ್ತಿದ್ದಾರೆ.
ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆ ಇದೆ. ಎಸ್ಸಿ ಮಹಿಳೆ ಗೀತಾ ಶಿವರಾಜ ಬುಕ್ಕಣ್ಣ ಅವರು ಒಬ್ಬರೇ ಇರುವುದರಿಂದ ಅನಾಯಸವಾಗಿ ಆಯ್ಕೆಯಾಗುವ ನಿಚ್ಚಳವಾಗಿದೆ.
ಅಧ್ಯಕ್ಷರನ್ನು ಆಯ್ಕೆ ಮಾಡುವ ಹೊಣೆಗಾರಿಕೆಯನ್ನು ಪುರಸಭೆ ಸದಸ್ಯರು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಅವರಿಗೆ ಒಪ್ಪಿಸಿದ್ದಾರೆ. ಯಾರ ಹೆಸರು ಅಂತಿಮವಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.