

ಮಸ್ಕಿ: ಸರ್ಕಾರದ ಭೂಮಿ ಒತ್ತುವರಿಯಾಗದಂತೆ ಕಾಪಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.
ಪಟ್ಟಣದ ತಾಪಂ ಕಚೇರಿಯಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಸಭೆಯಲ್ಲಿ ಮಂಗಳವಾರ ಮಾತನಾಡಿ, ನೀರಾವರಿ ಇಲಾಖೆ ಭೂಮಿಯನ್ನು ಬಹಳಷ್ಟು ಜನ ಕಬಳಿಕೆ ಮಾಡಿಕೊಂಡಿದ್ದಾರೆ. ನಾಳೆಯಿಂದಲೇ ಸರ್ವೇ ಅಧಿಕಾರಿಗಳು, ತಹಸೀಲ್ದಾರ್ ಮತ್ತು ನೀರಾವರಿ ಅಧಿಕಾರಿಗಳು ಜಂಟಿಯಾಗಿ ಪರಿಶೀಲಿಸಿ ವರದಿ ಕೊಡಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಸರ್ಕಾರಕ್ಕೆ ವರದಿ ಕೊಡುತ್ತೇನೆ. ರೈತರಿಗೆ ತಲುಪಬೇಕಾದ ನೀರನ್ನು ತಡೆ ಹಿಡಿಯದೆ ನೀರು ಕೊಡುವ ವ್ಯವಸ್ಥೆ ಮಾಡಿ. ತಲೇಖಾನ ಮತ್ತು ಬಸಾಪುರ ಗ್ರಾಮದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಜಾಗದ ಕೊರತೆ ಇದೆ. ಕಟ್ಟಡ ಕಟ್ಟಲು ಅನುದಾನ ಒದಗಿಸಲಾಗಿದೆ. ಬಿಇಒ ಮತ್ತು ತಹಸೀಲ್ದಾರ್ ಸೇರಿ ಜಾಗದ ಸಮಸ್ಯೆ ಬಗೆಹರಿಸಬೇಕು. ಸಭೆಗೆ ಎಲ್ಲಾ ಅಧಿಕಾರಿಗಳು ಹಾಜರಿರದಿದ್ದಲ್ಲಿ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ತಾಪಂ ಇಒ ಗೆ ಸೂಚಿಸಿದರು.