

ಮಸ್ಕಿ : ಬೆಂಗಳೂರಿನ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಕರ್ನಾಟಕ ಭೋವಿ (ವಡ್ಡರ) ಸಮುದಾಯದ ಮಸ್ಕಿ ತಾಲೂಕು ಘಟಕ, ಪಟ್ಟಣದ ತಹಸಿಲ್ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿತು.
ಅಧ್ಯಕ್ಷ ದುರುಗಪ್ಪ ಚಿಗರಿ ಮಾತನಾಡಿ, ದುರುಗಪ್ಪ ಚಿಗರಿ ಅಖಂಡ ಶ್ರೀನಿವಾಸಮೂರ್ತಿ ಪರಿಶಿಷ್ಟ ಸಮುದಾಯದ ಜನಪ್ರಿಯ ಶಾಸಕರಾಗಿದ್ದು ದುಷ್ಕರ್ಮಿಗಳು ಶಾಸಕರ ಮನೆಗೆ ಬೆಂಕಿ ಹಚ್ಚುವ ಕೆಲಸ ಮಾಡಿರುವುದು ಖಂಡನೀಯ. ಒಂದು ಸಮುದಾಯದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿರುವುದು ತಪ್ಪು. ತಪ್ಪು ಮಾಡಿದವರ ವಿರುದ್ಧ ಕಾನೂನು ರೀತಿಯಲ್ಲಿ ಹೋರಾಟ ಮಾಡುವುದನ್ನು ಬಿಟ್ಟು ಕಾನೂನನ್ನೇ ಕೈಗೆತ್ತಿಕೊಂಡು ಸಾರ್ವಜನಿಕರ ಆಸ್ತಿಪಾಸ್ತಿಯನ್ನು ಹಾನಿಗೊಳಿಸಿದ್ದು ಇದು ಪೂರ್ವ ನಿಯೋಜಿತ ಕೃತ್ಯವಾಗಿದೆ. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕುಟುಂಬಕ್ಕೆ ಸರ್ಕಾರ ರಕ್ಷಣೆ ನೀಡಬೇಕು. ಈ ಕೃತ್ಯದ ಹಿಂದಿರುವವರನ್ನು ಪತ್ತೆ ಹಚ್ಚಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಪುರಸಭೆ ಸದಸ್ಯ ರಂಗಪ್ಪ ಅರಿಕೇರಿ, ಭೋವಿ ಸಮುದಾದಯ ಮುಖಂಡರಾದ ಮಲ್ಲಯ್ಯ ಗುಡಸಲಿ, ಸಾರಪ್ಪ ಬಂಗಾಲಿ, ವೀರೇಶ ಆನೆಹೊಸೂರು, ರಮೇಶ ಮ್ಯಾಗೇರಿ, ಸೋಮಣ್ಣ ಅಮೀನಗಡ, ಹನುಮಂತಪ್ಪ, ಬಸವರಾಜ ಬುಕ್ಕಣ್ಣ, ನಾಗರಾಜ ರಾಯಚೂರು, ಹನುಮಂತ ತಲೇಖಾನ, ಕೃಷ್ಣ ಚಿಗರಿ, ರವಿ ಚಿಗರಿ ಹಾಗೂ ಇತರರಿದ್ದರು.