

ಮಸ್ಕಿ: ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ಕಳೆದ ಒಂದು ತಿಂಗಳಿನಿಂದ ಬಸ್ ನಿಲ್ಲಿಸದ ಕಾರಣ ಸ್ಥಳೀಯರು ಹಾಗೂ ವ್ಯಾಪಾರಸ್ಥರು ಶನಿವಾರ ಪ್ರತಿಭಟನೆ ನಡೆಸಿ, ಬಸ್ ನಿಲುಗಡೆಗಾಗಿ ಒತ್ತಾಯಿಸಿದರು.
ಹಳೇ ಬಸ್ ನಿಲ್ದಾಣದ ಬಳಿ ನಿಲ್ಲುತ್ತಿದ್ದ ಬಸ್‌ಗಳನ್ನು ಈಗ ಅಶೋಕ ವೃತ್ತದ ಬಳಿ ನಿಲ್ಲಿಸಲಾಗುತ್ತಿದೆ. ಪ್ರಯಾಣಿಕರು ಅಲ್ಲಿಗೆ ತೆರಳಲು ಬಸವೇಶ್ವರ ನಗರ, ವಾಲ್ಮೀಕಿ ವೃತ್ತ, ಕನಕವೃತ್ತದ ಮಾರ್ಗವಾಗಿ ಎರಡು ಕಿಮೀ ದೂರ ಹೋಗಬೇಕು.
ಇದರಿಂದ ತೊಂದರೆಯಾಗಿದೆ. ಇನ್ನು ಅಶೋಕ ವೃತ್ತ ಮತ್ತು ವಾಲ್ಮೀಕಿ ವೃತ್ತದ ಬಳಿ ಮಾತ್ರ ಬಸ್ ನಿಲುಗಡೆಗೆ ಅವಕಾಶ ಕಲ್ಪಿಸಿದ್ದು, ಉಳಿದ ಭಾಗದಿಂದ ಬರುವ ಜನರಿಗೆ ಅನನುಕೂಲವಾಗುತ್ತಿದೆ.
ಅಲ್ಲದೆ ರಾತ್ರಿ ವೇಳೆ ಪ್ರಯಾಣಿಕರಿಗೆ ತೀವ್ರ ಸಮಸ್ಯೆಯಾಗಿದೆ. ಕೂಡಲೇ ಹಳೇ ನಿಲ್ದಾಣದಲ್ಲಿ ಬಸ್ ನಿಲ್ಲಿಸುವಂತೆ ದಲಿತ ಸಂಘರ್ಷ ಸಮಿತಿಯ ಪ್ರಮುಖ ಹನುಮಂತ ವೆಂಕಟಾಪುರ ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಡಿಪೋ ವ್ಯವಸ್ಥಾಪಕ ಆದಪ್ಪ ಮಾತನಾಡಿ, ಮೇಲಧಿಕಾರಿಗಳ ಗಮನಕ್ಕೆ ತಂದು ಹಳೇ ನಿಲ್ದಾಣದ ಬಳಿ ಬಸ್ ನಿಲ್ಲಿಸಲು ಕ್ರಮವಹಿಸಲಾಗುವುದು. ಅದಕ್ಕೆ ಕಾಲಾವಕಾಶ ನೀಡಿ ಎಂದು ಕೋರಿದರು.
ಸಿಪಿಐ ಬಾಲಚಂದ್ರ ಡಿ.ಲಕ್ಕಂ ಮಾತನಾಡಿ, ಏಕಾಏಕಿ ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದಾಗ, ಪ್ರತಿಭಟನಕಾರರು ಪ್ರತಿಕ್ರಿಯಿಸಿ, ಏಕಾಏಕಿ ಪ್ರತಿಭಟನೆ ಮಾಡುತ್ತಿಲ್ಲ. ಈ ಮೊದಲು ನಿಮ್ಮ ಗಮನಕ್ಕೆ ತರಲಾಗಿತ್ತು. ಇದುವರೆಗೂ ಬಸ್ ನಿಲುಗಡೆ ಆಗುತ್ತಿಲ್ಲ.
ಅದಕ್ಕಾಗಿ ಪ್ರತಿಭಟನೆ ಮಾಡುತ್ತಿರುವುದಾಗಿ ಹೇಳಿದರು. ಬೀದಿ ಬದಿ ವ್ಯಾಪಾರಿಗಳು, ಹಳೇ ಬಸ್ ನಿಲ್ದಾಣದ ಬಳಿ ಇರುವ ವಿವಿಧ ವ್ಯಾಪಾರಸ್ಥರು ಪಾಲ್ಗೊಂಡಿದ್ದರು.