

ಮಸ್ಕಿ: ತಾಲೂಕಿನ ಕುಣಿಕೆಲ್ಲೂರು-ಮಿಟ್ಟಿಕೆಲ್ಲೂರು ಅವಳಿ ಗ್ರಾಮದ ಆರಾಧ್ಯ ದೈವ ಶ್ರೀಹಳ್ಳಿ ಬಸವೇಶ್ವರ ರಥೋತ್ಸವ ಅದ್ದೂರಿಯಾಗಿ ಜರುಗಿತು.
ಶ್ರೀಹಳ್ಳಿ ಬಸವೇಶ್ವರ ಮೂರ್ತಿಗೆ ಬೆಳಗ್ಗೆ ರುದ್ರಾಭಿಷೇಕ, ಹೋಮ, ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ನಂತರ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 27 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹಳ್ಳಿ ಬಸವೇಶ್ವರ ಜಾತ್ರೆ ಪ್ರಯುಕ್ತ ಗಂಗಾವತಿ ತಾಲೂಕಿನ ಕೇಸರಹಟ್ಟಿ ಗ್ರಾಮದ 50ಕ್ಕೂ ಹೆಚ್ಚು ಕುಟುಂಬಸ್ಥರು ಎರಡು ದಿನ ಮೊದಲೇ ಆಗಮಿಸಿ ವಿಶೇಷ ಪೂಜೆ ಸಲ್ಲಿಸುವುದರ ಜತೆಗೆ ದಾಸೋಹಕ್ಕೆ ಅಕ್ಕಿ ಮತ್ತು ವಧು-ವರರಿಗೆ ಬಟ್ಟೆಗಳನ್ನು ನೀಡಿದರು.
ಸಂತೆಕೆಲ್ಲೂರಿನ ಘನಮಠೇಶ್ವರ ಮಠದ ಶ್ರೀ ಗುರುಬಸವ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಸಂತೆಕೆಲ್ಲೂರಿನ ಮಹಾಂತಿನ ಮಠದ ಮಹಾಂತ ಸ್ವಾಮೀಜಿ, ಹುನಕುಂಟಿಯ ಶರಣಯ್ಯ ತಾತ, ಅಂಕಲಿಮಠದ(ತಲೆಕಟ್ಟು) ಬಸವರಾಜಸ್ವಾಮಿ, ಮುದಗಲ್ ಜ್ಞಾನೇಶ್ವರಮಠದ ಸಿದ್ದಯ್ಯಸ್ವಾಮಿ, ಶಾಸಕ ಆರ್.ಬಸನಗೌಡ ತುರ್ವಿಹಾಳ ಇತರರಿದ್ದರು.