

ಮಸ್ಕಿ: ಬಹು ವರ್ಷಗಳಿಂದ ನನೆಗುದಿಗೆ ಬಿದಿದ್ದ ತಾಲೂಕು ಆಡಳಿತ ಸೌಧ ನಿರ್ಮಾಣ ಜಾಗದ ಸಮಸ್ಯೆ ಇತ್ಯರ್ಥವಾಗಿದ್ದು, ಸೋಮವಾರ ನೀರಾವರಿ ನಿಗಮದ ಕಾರ್ಯನಿರ್ವಾಹಕ ಅಭಿಯಂತರ ಸತ್ಯನಾರಯಣ ಶಟ್ಟಿ ಅವರು, ತಹಸೀಲ್ದಾರ್ ಅರಮನೆ ಸುಧಾ ಅವರಿಗೆ ಭೂಮಿಯ ದಾಖಲೆಗಳನ್ನು ಹಸ್ತಾಂತರ ಮಾಡಿದರು.
ಪಟ್ಟಣದ ಲಿಂಗಸುಗೂರು ರಸ್ತೆಯ ನೀರಾವರಿ ನಿಗಮಕ್ಕೆ ಸೇರಿದ 5 ಎಕರೆ ಭೂಮಿಯನ್ನು ಲಿಂಗಸುಗೂರಿನ ನೋಂದಣಿ ಇಲಾಖೆಯಲ್ಲಿ ಕಂದಾಯ ಇಲಾಖೆ ಹೆಸರಿಗೆ ನೋಂದಾಯಿಸಿದ ನಂತರ ಎಲ್ಲ ದಾಖಲೆಗಳನ್ನು ತಹಸೀಲ್ದಾರ್‌ಗೆ ಹಸ್ತಾಂತರಿಸಲಾಯಿತು.
ಮಸ್ಕಿ ತಾಲೂಕು ಕೇಂದ್ರವಾದ ಬಳಿಕ ಆಡಳಿತ ಸೌಧ ನಿರ್ಮಾಣಕ್ಕೆ ಜಾಗದ ಕೊರತೆ ಇದ್ದ ಕಾರಣ ಹಿಂದಿನ ಶಾಸಕ ಪ್ರತಾಪಗೌಡ ಪಾಟೀಲ, ನೀರಾವರಿ ನಿಗಮದ ಜಾಗ ಕೊಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. ಅದಕ್ಕಾಗಿ ಹಲವು ಬಾರಿ ಎರಡು ಇಲಾಖೆಗಳ ನಡುವೆ ಪತ್ರ ವ್ಯವಹಾರ ನಡೆದು ಜಾಗ ಕೊಡುವ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು.
ಈಗಿನ ಶಾಸಕ ಆರ್.ಬಸನಗೌಡ ತುರ್ವಿಹಾಳ, ನೀರಾವರಿ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ನಡುವೆ ಸತತ ಸಭೆ ಮಾಡಿ ಜಾಗ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮವಾರ ಕಂದಾಯ ಇಲಾಖೆಗೆ ಭೂಮಿ ಹಸ್ತಾಂತರವಾಗುವ ಮೂಲಕ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.
ದಾಖಲೆ ಹಸ್ತಾಂತರ ವೇಳೆ ಉಪ ನೋಂದಣಿ ಅಧಿಕಾರಿ ಎಚ್.ನಿವೇದಿತಾ, ಕಂದಾಯ ನಿರೀಕ್ಷಕ ಶರಣೇಗೌಡ ಪಾಟೀಲ, ಶಾಸಕರ ಆಪ್ತ ಸಹಾಯಕ ಶರಣಗೌಡ, ಗ್ರಾಮ ಲೆಕ್ಕಾಧಿಕಾರಿ ಗಂಗಪ್ಪ, ನೀರಾವರಿ ನಿಗಮದ ಕೆ.ಮಲ್ಲಯ್ಯ ಇತರರು ಇದ್ದರು.
ಬಹು ವರ್ಷಗಳಿಂದ ನನೆಗುದಿಗೆ ಬಿದಿದ್ದ ತಾಲೂಕು ಆಡಳಿತ ಸೌಧ ನಿರ್ಮಾಣ ಜಾಗದ ತೊಂದರೆ ನಿವಾರಣೆಯಾಗಿದೆ. ನೀರಾವರಿ ಇಲಾಖೆ ಜಾಗ ಕಂದಾಯ ಇಲಾಖೆಗೆ ಹಸ್ತಾಂತರವಾಗಿದ್ದು, ಶೀಘ್ರವೇ ಆಡಳಿತ ಸೌಧ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು.ಆರ್.ಬಸನಗೌಡ ತುರ್ವಿಹಾಳ ಶಾಸಕರು ಮಸ್ಕಿ