

ಮಸ್ಕಿ: ಘನಮಠ ನಾಗಭೂಷಣ ಶಿವಯೋಗಿಗಳ 143ನೇ ಪುಣ್ಯಸ್ಮರಣೋತ್ಸವ ಹಾಗೂ ಪುರಾಣ ಗ್ರಂಥ ಬಿಡುಗಡೆ ಸಮಾರಂಭ ಡಿ.26ರಂದು ಸಂತೆಕೆಲ್ಲೂರು ಗ್ರಾಮದಲ್ಲಿ ನಡೆಯಲಿದೆ ಎಂದು ಘನಮಠೇಶ್ವರ ಮಠದ ಪೀಠಾಧಿಪತಿ ಶ್ರೀ ಗುರುಬಸವ ಸ್ವಾಮೀಜಿ ತಿಳಿಸಿದ್ದಾರೆ.
ಪುಣ್ಯಸ್ಮರಣೋತ್ಸವ ನಿಮಿತ್ತ ಹಮ್ಮಿಕೊಂಡಿರುವ ಶರಣರ ಜೀವನ ದರ್ಶನ ಪ್ರವಚನ ಡಿ.25 ರಂದು ಮಂಗಲಗೊಳ್ಳಲಿದೆ. ಡಿ.26 ರಂದು ಬೆಳಗ್ಗೆ ನಾಗಭೂಷಣ ಶಿವಯೋಗಿಗಳ ಗದ್ದುಗೆಗೆ ರುದ್ರಾಭಿಷೇಕ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ನಂತರ ವಚನ ಕಟ್ಟಿನ ಅಡ್ಡಪಲ್ಲಕ್ಕಿ ಮೆರವಣಿಗೆ ಸಾಗಲಿದೆ. ಸಂಜೆ 5ಕ್ಕೆ ರಥೋತ್ಸವ ಜರುಗಲಿದೆ. ಸಂಜೆ 7ಕ್ಕೆ ಧಾರ್ಮಿಕ ಸಭೆಯಲ್ಲಿ ಸಾಧಕರಿಗೆ ಸನ್ಮಾನ, ಮಸ್ಕಿಯ ಬಸವಪ್ಪ ಶಾಸ್ತ್ರಿ ರಚಿಸಿದ ಘನಮಠ ನಾಗಭೂಷಣ ಶಿವಯೋಗಿಗಳ ಪುರಾಣ ಗ್ರಂಥ ಮರುಮುದ್ರಣ ಪುಸ್ತಕ ಬಿಡುಗಡೆ ನಡೆಯಲಿದೆ. ಸ್ವಾಮೀಜಿಗಳು ಆಶೀವರ್ಚನ ನೀಡಲಿದ್ದಾರೆ ಎಂಧು ಗುರುಬಸವ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.