

ಕಸಾಪ ತಾಲೂಕು ಪದಾಧಿಕಾರಿಗಳ ಪದಗ್ರಹಣ
ಮಸ್ಕಿ: ಸ್ವಾತಂತ್ರೃಪೂರ್ವದಲ್ಲಿ ಅಸ್ತಿತ್ವಕ್ಕೆ ಬಂದ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರನ್ನು ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.
ಪಟ್ಟಣದ ಗಚ್ಚಿನ ಹಿರೇಮಠದಲ್ಲಿ ಭಾನುವಾರ ಕಸಾಪ ತಾಲೂಕು ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾರ್ಯಚಟುವಟಿಕೆಗಳ ಆರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ಕನ್ನಡಿಗರು ಕನ್ನಡದ ಬಗ್ಗೆ ಅಭಿಮಾನ ಉಳ್ಳವರಾಗಬೇಕು. ಭಾಷೆ, ನೆಲ, ನೀರು, ಬದುಕಿನ ಪ್ರಶ್ನೆ ಬಂದಾಗ ಧ್ವನಿ ಎತ್ತಬೇಕು ಎಂದರು.
ಗಚ್ಚಿನ ಹಿರೇಮಠದ ಶ್ರೀ ವರರುದ್ರಮುನಿ ಶಿವಾಚಾರ್ಯರು ಮಾತನಾಡಿ ಕನ್ನಡದ ಕೆಲಸವೆಂದರೆ ಬದುಕಿನ ಉಸಿರಿನ ಕೆಲಸವಿದ್ದಂತೆ. ಉಸಿರು ಇದ್ದರಷ್ಟೇ ಮನುಷ್ಯನಿಗೆ ಬೆಲೆ. ಕಸಾಪ ಚಟುವಟಿಕೆಗಳಿಗೆ ಶ್ರೀಮಠ ಸದಾ ಬೆಂಗಾವಲಾಗಿ ನಿಲ್ಲಿದೆ ಎಂದರು. ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ಹಾಗೂ ವೈದ್ಯಾಧಿಕಾರಿ ಬಸವಶ್ರೀಯನ್ನು ಸನ್ಮಾನಿಸಲಾಯಿತು.
ಸ್ತಕ ಬಿಡುಗಡೆ: ದೇವರಾಜ ಜಿ.ಸಿ.ಘಂಟೆ ರಚಿತ ನನ್ನ ಅವ್ವ ಹಾಗೂ ವರದೇಂದ್ರ ಕೆ.ಮಸ್ಕಿ ಬರೆದಿರುವ ಹರಿದ ಹೊಕ್ಕಳ ಬಳ್ಳಿ ಕವನ ಸಂಕಲಗಳನ್ನು ಬಿಡುಗಡೆ ಮಾಡಲಾಯಿತು. ನನ್ನ ಅವ್ವ ಕೃತಿ ಕುರಿತು ಶಂಕರ ಸಕ್ರಿ, ಹರಿದ ಹೊಕ್ಕಳ ಬಳ್ಳಿ ಕವನ ಸಂಕಲನ ಕುರಿತು ಡಾ.ಶಶಿಕಾಂತ ಕಾಡ್ಲೂರು ಮಾತನಾಡಿದರು.
ಸಿಂಧನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಸಿ.ಬಿ.ಚಿಲ್ಕರಾಗಿ, ಕಸಾಪ ಜಿಲ್ಲಾ ಅಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ಕಸಾಪ ತಾಲೂಕು ಅಧ್ಯಕ್ಷ ಆದಪ್ಪ ಹೆಂಬ, ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಮಹಾಂತೇಶ ಮಸ್ಕಿ, ಪತ್ರಕರ್ತ, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ವೀರೇಶ ಸೌದ್ರಿ, ಪಂಪಯ್ಯ ಸಾಲಿಮಠ, ಸಾಹಿತಿ ಗುಂಡುರಾವ್ ದೇಸಾಯಿ ಇತರರಿದ್ದರು.