

ಮಸ್ಕಿ: ಪ್ರಶಸ್ತಿ-ಪುರಸ್ಕಾರಗಳು ವ್ಯಕ್ತಿಯನ್ನು ಹುಡುಕಿಕೊಂಡು ಹೋಗಬೇಕೆ ವಿನಃ ಇದಕ್ಕಾಗಿ ಲಾಭಿ ಮಾಡುತ್ತಿರುವವರು ಕಾಯಕದ ಕಡೆ ಗಮನ ಕೊಡದೆ ಕಾಲಹರಣ ಮಾಡುತ್ತಿರುವುದು ಆತಂಕಕಾರಿ ಸಂಗತಿ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.
ಪಟ್ಟಣದ ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಾಮಾಜಿಕ ಸಂಸ್ಥೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಅಭಿನಂದನ್ ಶಿಕ್ಷಕ ರತ್ನ ಪ್ರಶಸ್ತಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು.
ಎಲೆಮರೆ ಕಾಯಿಯಂತೆ ಕರ್ತವ್ಯ ನಿರ್ವಹಿಸುತ್ತಿರುವ ಮತ್ತು ಆದರ್ಶ ಶಿಕ್ಷಕರಾಗಿ ನಿವೃತ್ತಿ ಹೊಂದಿರುವ ಶಿಕ್ಷಕರನ್ನು ಸಾರ್ವಜನಿಕರೇ ಗುರುತಿಸಿ ಮತ ನೀಡುವ ಮೂಲಕ ಆಯ್ಕೆ ಮಾಡಿದ 20 ಗುರುಗಳನ್ನು ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಾಮಾಜಿಕ ಸಂಸ್ಥೆಯವರು ಗುರುತಿಸಿ ಗೌರವಿಸುತ್ತಿರುವುದು ಅಭಿನಂದನಾರ್ಹ ಕಾರ್ಯ ಎಂದರು.
ನೂರಾರು ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡಿದ ನಿವೃತ್ತ ಶಿಕ್ಷಕ ಯಲ್ಲಪ್ಪ ಜಾಲಿಹಾಳ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ, ರಾಜ್ಯದ ಬೇರೆ ಬೇರೆ ಭಾಗಗಳಿಂದ 19 ಜನ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಹಿಸಲಾಯಿತು.
ವೆಂಕಟಗಿರಿ ಸಿದ್ದಾಶ್ರಮದ ಸದಾಶಿವಾಚಾರ್ಯರು, ಡಾ.ಶಿವಶರಣಪ್ಪ ಇತ್ಲಿ, ಜಿಪಂ ಮಾಜಿ ಸದಸ್ಯ ಎಚ್.ಬಿ.ಮುರಾರಿ, ಕೆ.ಕರಿಯಪ್ಪ, ಶಂಕರಗೌಡ ಕರಡಕಲ್, ಬಾಲಸ್ವಾಮಿ, ಪಂಪಾಪತಿ ಹೂಗಾರ, ಬಸಪ್ಪ ತನಿಖೆದಾರ, ರಾವಣ್ಣ ಹಂಪರಗುಂದಿ ಇತರರಿದ್ದರು.