

ಮಸ್ಕಿ : ಕುಡಿತದ ಚಟದಿಂದ ಮನುಷ್ಯ ಆರೋಗ್ಯ ಹಾಳು ಮಾಡಿಕೊಳ್ಳುವುದರ ಜತೆಗೆ ಇಡೀ ಕುಟುಂಬವೇ ಸರ್ವನಾಶವಾಗುತ್ತದೆ. ದುಷ್ಟಚಟಕ್ಕೆ ಬಲಿಯಾಗಬಾರದು ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.
ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ ರಾಯಚೂರು ಜಂಟಿಯಾಗಿ ಮಂಗಳವಾರ ಹಮ್ಮಿಕೊಂಡಿದ್ದ 1859 ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಆರಂಭದಲ್ಲಿ ಯುವಕರು ಕುಡಿಯುವುದನ್ನು ಹವ್ಯಾಸವಾಗಿ ಬೆಳೆಸಿಕೊಳ್ಳುತ್ತಾರೆ. ನಂತರ ಅದಕ್ಕೆ ಬಲಿಯಾಗುತ್ತಿದ್ದಾರೆ. ಕುಡಿತದಿಂದಾಗಿ ದುಡಿದ ಹಣ ಜೀವನ ನಿರ್ವಹಣೆಗೆ ಬಳಸದೆ ಕುಡಿತಕ್ಕೆ ಹಾಳು ಮಾಡಿಕೊಳ್ಳುತ್ತಿದ್ದಾರೆ. ಕುಡಿಯುವುದನ್ನು ಬಿಟ್ಟು ಉತ್ತಮ ಆರೋಗ್ಯ, ಶಿಕ್ಷಣ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಿದ ಎಂದು ಸಲಹೆ ನೀಡಿದರು.
ಮದ್ಯವರ್ಜನ ಶಿಬಿರದ ಯೋಜನಾಧಿಕಾರಿ ನಗೇಶ ಮಾತನಾಡಿ ಶಿಬಿರದಿಂದ ಆಗುವ ಪ್ರಯೋಜನ ಮತ್ತು ಶಿಬಿರ ಹೇಗೆ ಸಂಘಟಿಸಲಾಗುತ್ತದೆ ಎಂಬುದನ್ನು ವಿವರಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ನಿರ್ದೇಶಕ ಮೋಹನ್ ನಾಯ್ಕ ಮಾತನಾಡಿ, ಎಂಟು ದಿನಗಳ ವರಗೆ ನಡೆಯುವ ಈ ಶಿಬಿರದಿಂದ ಅನೇಕರು ಮನ ಪರಿವರ್ತನೆಯಾಗಿ ಹೊಸ ಬದುಕು ಕಟ್ಟಿಕೊಳ್ಳಲು ಸಹಾಯಕವಾಗುತ್ತದೆ. ಈಗಾಗಲೇ ರಾಜ್ಯದಲ್ಲಿ 1 ಲಕ್ಷ 36 ಸಾವಿರ ಜನ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಈಗ ಸಮಾಜದಲ್ಲಿ ಗೌರವಯುತವಾಗಿ ಬದುಕುತ್ತಿದ್ದಾರೆ ಎಂದರು.
ಮದ್ಯವರ್ಜನ ಶಿಬಿರದ ಅಧ್ಯಕ್ಷ ಎಚ್.ಬಿ.ಮುರಾರಿ, ಗೌರವ ಅಧ್ಯಕ್ಷ ಡಾ.ಬಿ.ಎಚ್.ದಿವಟರ್, ಕಾರ್ಯದರ್ಶಿ ಶಾಲಿನಿ ಜಿ. ಡಾ.ಶಿವಶರಣಪ್ಪ ಇತ್ಲಿ ಮಾತನಾಡಿದರು. ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ ಸದಸ್ಯ ಎಂ.ಅಮರೇಶ, ಪುರಸಭೆ ಉಪಾಧ್ಯಕ್ಷೆ ಗೀತಾ ಶಿವರಾಜ, ಪ್ರಮುಖರಾದ ಶಿವಕುಮಾರ ಎನ್., ಅಂದಾನಪ್ಪ ಗುಂಡಳ್ಳಿ, ಕೆ.ಅಪ್ಪಾಜಿಗೌಡ, ಶರಣಬಸವ ಸೊಪ್ಪಿಮಠ, ಮಲ್ಲಪ್ಪ ಅಂಕುಶದೊಡ್ಡಿ ಸೂಗಪ್ಪ ಮರಳದ ಇತರರಿದ್ದರು.