ನೀರು ಹಿತ-ಮಿತವಾಗಿ ಬಳಸಿ

msk-2
ಮಸ್ಕಿ ದೈವದ ಕಟ್ಟೆ ಬಳಿ ಅಮೃತ 2.0 ಯೋಜನೆ ಕಾಮಗಾರಿಗೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಚಾಲನೆ ನೀಡಿದರು. ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಉಪಾಧ್ಯಕ್ಷೆ ಗೀತಾ ಶಿವರಾಜ ಬುಕ್ಕಣ್ಣ, ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕೃಷ್ಣ ಚಿಗರಿ, ಮುಖಂಡರಾದ ಬಸನಗೌಡ ಪೊಲೀಸ್ ಪಾಟೀಲ ಇತರರಿದ್ದರು.
Published on

ಮಸ್ಕಿ: ಅಮೃತ 2.0 ಯೋಜನೆಯಡಿ ಪಟ್ಟಣದ 4,710 ಮನೆಗಳಿಗೆ ಶುದ್ಧ ಕುಡಿವ ನೀರನ್ನು ಒಂದೂವರೇ ವರ್ಷದೊಳಗೆ ಪೂರೈಸಲಾಗುವುದು ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.

ಪಟ್ಟಣದ ದೈವದ ಕಟ್ಟೆ ಬಳಿ ಸೋಮವಾರ ಅಮೃತ 2.0 ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಈ ಯೋಜನೆ ಅನುಷ್ಠಾನದಲ್ಲಿ ರಸ್ತೆ ತೋಡುವುದು, ಪೈಪ್ ಹಾಳಾಗುವುದು ಸಹಜ. ಸಾರ್ವಜನಿಕರು ಕಾಮಗಾರಿಗೆ ಸಹಕಾರ ನೀಡಬೇಕು.

ದೂರುಗಳಿದ್ದರೆ ತಕ್ಷಣ ಪರಿಹರಿಸಿ ಕಾಮಗಾರಿ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು. ಕಾಮಗಾರಿ ನಂತರ ನಲ್ಲಿಗಳಿಗೆ ಮೀಟರ್ ಅಳವಡಿಸುತ್ತಿದ್ದು, ಬಳಸುವ ನೀರಿಗೆ ಶುಲ್ಕ ವಿಧಿಸಲಾಗುತ್ತದೆ. ಹೀಗಾಗಿ ನೀರು ಅಮೂಲ್ಯವೆಂದು ಅರಿತು, ಹಿತ-ಮಿತವಾಗಿ ಬಳಸಬೇಕು ಎಂದು ಸಲಹೆ ನೀಡಿದರು.

ಎಇಇ ಚಂದ್ರಕಾಂತ ಚವ್ಹಾಣ ಮಾತನಾಡಿ, 10 ಲಕ್ಷ ಲೀ. ಸಾಮರ್ಥ್ಯದ ಜಲ ಸಂಗ್ರಹ ಟ್ಯಾಂಕ್ ನಿರ್ಮಾಣ, ಹೊಸ ಪೈಪ್‌ಲೈನ್, ಹೊಸ ಪಂಪಿಂಗ್ ಮಷಿನ್ ಜೋಡಣೆ, ಕುಡಿವ ನೀರಿನ ಕೆರೆಗೆ 11 ಕೆ.ವಿ ವಿದ್ಯುತ್ ಎಕ್ಸ್‌ಪ್ರೆಸ್ ಫೀಡರ್ ಲೈನ್ ಅಳವಡಿಕೆ, ಜಲ ಶುದ್ಧೀಕರಣ ಘಟಕವನ್ನು ಪುನರುಜ್ಜೀವನಗೊಳಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ.

ಈ ಯೋಜನೆಗೆ ಕೇಂದ್ರ ಸರ್ಕಾರ ಶೇ.50, ರಾಜ್ಯ ಸರ್ಕಾರ ಶೇ.40 ರಷ್ಟು, ಸ್ಥಳೀಯ ಸಂಸ್ಥೆಯ ವಂತಿಗೆ ಶೇ.10 ರಷ್ಟು ಬಳಸಲಾಗುತ್ತದೆ ಎಂದು ತಿಳಿಸಿದರು.

ಸದಸ್ಯ ದೊಡ್ಡಕರಿಯಪ್ಪ, ಮುಖ್ಯಾಧಿಕಾರಿ ನರಸರಡ್ಡಿ, ಪ್ರಾ.ಕ.ಪ.ಸ. ಸಂಘದ ಅಧ್ಯಕ್ಷ ನಾಗಭೂಷಣ ಬಾರಕೇರ್, ಮುಖಂಡರಾದ ಅಂದಾನಪ್ಪ ಗುಂಡಳ್ಳಿ, ದೊಡ್ಡಪ್ಪ ಕಡಬೂರು, ಸೂಗಪ್ಪ ಮರಳದ, ಅಬ್ದುಲ್ ಗನಿಸಾಬ, ನಾಗರತ್ನ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net