

ಮಸ್ಕಿ: ಒಳ ಮೀಸಲು ಜಾತಿ ಸಮೀಕ್ಷೆಯಲ್ಲಿ ತಾಂತ್ರಿಕ ಸಮಸ್ಯೆಯ ಗೊಂದಲ ಸರಿಪಡಿಸಲಿ ಒತ್ತಾಯಿಸಿ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಸದಸ್ಯರು ಪಟ್ಟಣದ ತಹಸಿಲ್ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿ, ಉಪ ತಹಸೀಲ್ದಾರ್ ಪ್ರಕಾಶ ಬುಳ್ಳಾಗೆ ಮನವಿ ಸಲ್ಲಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಜಾತಿ ಸಮೀಕ್ಷೆಯಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಮಾದಿಗ ಸಮುದಾಯವನ್ನು ಜನರು ಆಡು ಭಾಷೆಯಲ್ಲಿ ಹರಿಜನ, ಮಾದರ ಎಂದು ಕರೆಯುವ ರೂಢಿಯಿದೆ. ಆದರೆ, ಗಣತಿದಾರರು ಸಮೀಕ್ಷೆಯಲ್ಲಿ ಮಾದಿಗ ಎಂದು ನಮೂದಿಸಲು ಹಿಂದೇಟು ಹಾಕುತ್ತಿದ್ದಾರೆ.
ಪಡಿತರ ಚೀಟಿ ಇಲ್ಲದಿರುವುದನ್ನು ನೆಪವಾಗಿಸಿ ಆ ಕುಟುಂಬವನ್ನು ಸಮೀಕ್ಷೆಯಿಂದ ಕೈ ಬಿಡಲಾಗುತ್ತಿದ್ದು, ಇಂತಹ ಸಮಸ್ಯೆಯನ್ನು ನಿವಾರಿಸಬೇಕು. ಪಡಿತರ ಚೀಟಿ ಇಲ್ಲದಿದ್ದಲ್ಲಿ ಇತರ ಗುರುತಿನ ಚೀಟಿಗಳನ್ನು ಪರಿಗಣಿಸಿ ಸಮೀಕ್ಷೆಗೆ ಒಳಪಡಿಸಬೇಕು.
ಇನ್ನೂ ಹತ್ತು ದಿನಗಳ ಹೆಚ್ಚುವರಿ ಸಮೀಕ್ಷೆಗೆ ಸರ್ಕಾರ ಅನುಮತಿಸಬೇಕು ಎಂದು ದಲಿತ ಮುಖಂಡ ಹನುಮಂತಪ್ಪ ವೆಂಕಟಾಪುರ ಒತ್ತಾಯಿಸಿದರು. ಬಳಗಾನೂರಿನ ತಿಕ್ಕಯ್ಯ, ಬಸಪ್ಪ ಬೈಲಗುಡ್ಡ, ಮೌನೇಶ ಮುರಾರಿ ಮಾತನಾಡಿದರು.