ಬುದ್ದಿನ್ನಿಯಲ್ಲಿ ಪ್ರೌಢಶಾಲೆ ಆರಂಭಿಸಲು ಒತ್ತಾಯಿಸಿ ಕೆಡಿಪಿ ಸಭೆಗೆ ಮುತ್ತಿಗೆ

120222 Buddinni Villagers Seize KDP Meeting
ಮಸ್ಕಿ ತಾಲೂಕಿನ ಬುದ್ದಿನ್ನಿ ಗ್ರಾಮಕ್ಕೆ ಸರ್ಕಾರಿ ಪ್ರೌಢಶಾಲೆ ಮುಂಜೂರು ಮಾಡಬೇಕು ಎಂದು ಒತ್ತಾಯಿಸಿ ವಿವಿಧ ಗ್ರಾಮಗಳ ಜನರು ವಿದ್ಯಾರ್ಥಿಗಳೊಂದಿಗೆ ತಾಪಂ ಕಚೇರಿಯಲ್ಲಿ ನಡೆಯುತ್ತಿದ್ದ ಕೆಡಿಪಿ ಸಭೆಗೆ ಮುತ್ತಿಗೆ ಹಾಕಿದರು.
Published on

ಮಸ್ಕಿ: ತಾಲೂಕಿನ ಬುದ್ದಿನ್ನಿ ಗ್ರಾಮಕ್ಕೆ ಸರ್ಕಾರಿ ಪ್ರೌಢಶಾಲೆ ಮುಂಜೂರು ಮಾಡಬೇಕು ಎಂದು ಒತ್ತಾಯಿಸಿ ವಿವಿಧ ಗ್ರಾಮಗಳ ಜನರು ವಿದ್ಯಾರ್ಥಿಗಳೊಂದಿಗೆ ಶುಕ್ರವಾರ ತಾಪಂ ಕಚೇರಿಯಲ್ಲಿ ನಡೆಯುತ್ತಿದ್ದ ಕೆಡಿಪಿ ಸಭೆಗೆ ಮುತ್ತಿಗೆ ಹಾಕಿದರು. ಇದರಿಂದ ಒಂದು ಗಂಟೆ ಕೆಡಿಪಿ ಸಭೆ ಸ್ಥಗಿತಗೊಂಡಿತ್ತು.

ಬುದ್ದಿನ್ನಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಿಸಬೇಕೆಂದು ಬುದ್ದಿನ್ನಿ, ಹರ್ವಾಪೂರ, ಹೂವಿನಬಾವಿ, ಮುದಬಾಳ, ಸಾನಬಾಳ, ಬೆಂಚಮರಡಿ, ಹಿಲಾಲಪೂರ, ತುಪ್ಪದೂರು, ಕಾಟಗಲ್ ಸೇರಿದಂತೆ ಇತರ ಗ್ರಾಮಗಳ ಜನರು ಅಶೋಕ ವೃತ್ತದಲ್ಲಿ ಧರಣಿ ನಡೆಸಿದರು. ತಾಪಂ ಕಚೇರಿಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆದಿರುವ ಮಾಹಿತಿ ತಿಳಿದು, ಅಲ್ಲಿಗೆ ತೆರಳಿ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಶಾಸಕ ಆರ್.ಬಸನಗೌಡ ಹಾಗೂ ಅಧಿಕಾರಿಗಳು ಪ್ರತಿಭಟನಾಕಾರರೊಂದಿಗೆ ಚರ್ಚಿಸಿದರು. ಬುದ್ದಿನ್ನಿ ಗ್ರಾಮಕ್ಕೆ ಪ್ರೌಢಶಾಲೆ ಮುಂಜೂರು ಮಾಡಲು ವಿಫಲರಾಗಿರುವ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಮುಂಬರುವ ಶೈಕ್ಷಣಿಕ ವರ್ಷದಿಂದ ಪ್ರೌಢಶಾಲೆ ಮುಂಜೂರು ಮಾಡದಿದ್ದರೆ ಜಿಪಂ ಹಾಗೂ ತಾಪಂ ಸೇರಿದಂತೆ ಇತರ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ತಿಳಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ನಾಗರೆಡ್ಡಪ್ಪ ದೇವರಮನಿ, ಶಿವಕುಮಾರ ಮ್ಯಾಗಳಮನಿ, ರಮೇಶ ವೀರಾಪುರ, ಡಿ.ಎಚ್.ಕಂಬಳಿ, ತಿಮ್ಮನಗೌಡ ಚಿಲ್ಕರಾಗಿ, ಬಸವರಾಜಪ್ಪಗೌಡ ಹಾರ್ವಪೂರ, ಚಂದ್ರಶೇಖರ ಕ್ಯಾತನಟ್ಟಿ, ಬಸವರಾಜ ಎಕ್ಕಿ, ಅಂಕುಶದೊಡ್ಡಿ ಗ್ರಾಪಂಅಧ್ಯಕ್ಷೆ ಚನ್ನಬಸಮ್ಮ ಭಜಂತ್ರಿ, ಸದಸ್ಯರಾದ ಗುರುರಾಜ ದೇಸಾಯಿ, ಸಿದ್ದರಾಮಪ್ಪ ಕುರಬರ, ಮೌನೇಶ ದೇವರಮಮನಿ, ಪಕೀರ್ ಸಾಬ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net