ಅಂಬೇಡ್ಕರ್‌ಗೆ ಅವಮಾನಿಸಿದ್ದ ಕಾಂಗ್ರೆಸ್ - ಡಿಸಿಎಂ ಗೋವಿಂದ ಕಾರಜೋಳ ಆರೋಪ

Maski DCM Govind Karajola
Published on

ಮಸ್ಕಿ: ಹಲವು ವರ್ಷಗಳಿಂದ ಆಡಳಿತ ಮಾಡಿದ ಕಾಂಗ್ರೆಸ್, ದಲಿತರನ್ನು ಮತಬ್ಯಾಂಕ್ ಮಾಡಿಕೊಂಡಿದೆಯಷ್ಟೇ. ಆದರೆ, ಅವರನ್ನು ಮೇಲೆತ್ತುವ ಕೆಲಸ ಮಾಡಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದಲಿತರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ತಂದಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಡಾ.ಬಾಬು ಜಗಜೀವನ್‌ರಾಮ್ ಅವರ 114ನೇ ಜಯಂತಿಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂಬೇಡ್ಕರ್ ಅವರು ಮೀಸಲನ್ನು ಸಂವಿಧಾನ ಬದ್ಧವಾಗಿ ನೀಡಿದ್ದರು. ಅದನ್ನು ಡಾ.ಬಾಬು ಜಗಜೀವನ್‌ರಾಮ ಅನುಷ್ಠಾನಕ್ಕೆ ತಂದ ಕೀರ್ತಿಗೆ ಪಾತ್ರರಾದರು ಎಂದು ನೆನಪಿಸಿಕೊಂಡರು.

ಇಡೀ ವಿಶ್ವವೇ ಮೆಚ್ಚಿದ ಬಹುದೊಡ್ಡ ಜ್ಞಾನಿ ಡಾ.ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಗೌರವಿಸಲಿಲ್ಲ. ಅವರು ನಿಧನರಾದಾಗ ದೆಹಲಿಯಲ್ಲಿ ಸಂಸ್ಕಾರ ಮಾಡಲು ಜಾಗ ಕೊಡದೆ ಅವಮಾನಿಸಿದ್ದು ಇತಿಹಾಸದಲ್ಲಿ ದಾಖಲಾಗಿದೆ. ದಲಿತರು ಇತ್ತೀಚಿಗೆ ವಿದ್ಯಾವಂತರಾಗಿ ರಾಜ್ಯ-ದೇಶದ ಆಗುಹೋಗುಗಳನ್ನು ಗಮನಿಸುವಷ್ಟು ಬುದ್ಧಿವಂತರಾಗಿದ್ದಾರೆ ಎಂಬುದನ್ನು ದೆಹಲಿ ಕಾಂಗ್ರೆಸ್ ಮುಖಂಡರ ಮುಂದೆ ಮಾಜಿ ಸಿಎಂ ಸಿದ್ದರಾಮಯ್ಯ ಒಪ್ಪಿಡಿರುವುದೇ ಸಾಕ್ಷಿ ಎಂದರು.

ಎಂಎಲ್ಸಿ ಎನ್.ರವಿಕುಮಾರ, ಶಾಸಕ ಬಸವರಾಜ ದಢೇಸುಗೂರು, ಜಿಲ್ಲಾ ಬಿಜೆಪಿ ಅಧ್ಯಕ್ಷ ರಮನಾಂದ ಯಾದವ್, ಜಿ.ಪಂ.ಸದಸ್ಯ ದುರುಗಪ್ಪ ಗುಡಗಲದಿನ್ನಿ, ಮಾಜಿ ಪುರಸಭೆ ಅಧ್ಯಕ್ಷ ಮೌನೇಶ ಮುರಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net