ಮಸ್ಕತ್ ನಲ್ಲಿ ವಿಶ್ವಕರ್ಮ ಪೂಜೆ ಮಹೋತ್ಸವ

IMG-20241106-WA0016.jpg
Published on

ಹುಬ್ಬಳ್ಳಿ: ಮಸ್ಕತ್ ನ ವಿಶ್ವಬ್ರಾಹ್ಮಣ ಒಕ್ಕೂಟದ ವತಿಯಿಂದ ಅಝೈಬ ಗಾರ್ಡನ್ ಬಿಲ್ಡಿಂಗ್ ಪೆಂಟ್ ಹೌಸ್ ನಲ್ಲಿರುವ ಸಭಾ ಭವನದಲ್ಲಿ "ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ'ವು ಹುಬ್ಬಳ್ಳಿಯ ವೇದಮೂರ್ತಿ ಬ್ರಹ್ಮಶ್ರೀ ಮುಕುಂದಾಚಾರ್ಯ ಗುರುವಿನ್ ಅವರ ಪೌರೋಹಿತ್ಯದಲ್ಲಿ ಇತ್ತೀಚೆಗೆ ಬಹಳ ವಿಜೃಂಭಣೆಯಿಂದ ನಡೆಯಿತು.

ಸಮಾಜದ ಬಂಧು, ಭಗಿನಿಯರು ಹಾಗೂ ಮಕ್ಕಳು ಸಾಂಪ್ರದಾಯಿಕ ಉಡುಗೆಯೊಂದಿಗೆ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಅತಿಥಿಗಳಾಗಿದ್ದ ನಿವೃತ್ತ ಪ್ರಾಚಾರ್ಯರು ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠದ ಅಜೇಂದ್ರ ಸ್ವಾಮೀಜಿ ಇವರ ಪಾದಪೂಜೆಯನ್ನು ಒಕ್ಕೂಟದ ಅಧ್ಯಕ್ಷ ರವೀಂದ್ರ ಆಚಾರ್ಯ ಕಳತ್ತೂರು ದಂಪತಿ ನೆರವೇರಿಸಿದರು.

ಪುರೋಹಿತರಾದ ಮುಕುಂದಾಚಾರ್ಯರ ನೇತೃತ್ವದಲ್ಲಿ ಸಮಾಜ ಬಾಂಧವರು ಹಾಗೂ ಸುಮಂಗಲೆಯರು ಪೂರ್ಣ ಕುಂಭ ಕಳಶ ಹಾಗೂ ವಾದ್ಯ ಘೋಷಗಳೊಂದಿಗೆ ಸಭಾ ಭವನಕ್ಕೆ ಸ್ವಾಮೀಜಿಯವರನ್ನು ಬರಮಾಡಿಕೊಂಡರು.

ಪೂಜಾ ಕಾರ್ಯಕ್ರಮವನ್ನು ಪುರೋಹಿತರು ನೆರವೇರಿಸಿದರು. ಹುಬ್ಬಳ್ಳಿಯ ಮಂಜುನಾಥ ಪುರೋಹಿತ್ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು. ಒಕ್ಕೂಟದ ಸದಸ್ಯರಿಂದ ಭಜನೆ ಹಾಗೂ ಕುಣಿತ ಮುಂತಾದವು ಜರುಗಿದವು.

ಸಭಾ ಕಾರ್ಯಕ್ರಮವು ಒಕ್ಕೂಟದ ಉಪಾಧ್ಯಕ್ಷ ಹುಬ್ಬಳ್ಳಿಯ ಮಹೇಶ ಪುರೋಹಿತರ ಅಧ್ಯಕ್ಷತೆಯಲ್ಲಿ ನೆರವೇರಿತು.

ಶ್ರೀಅಜೇಂದ್ರ ಸ್ವಾಮೀಜಿ ಅವರನ್ನು ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಿರೂಪಾಕ್ಷ ಸ್ವಾಮೀಜಿ ಇದ್ದರು.

ಪೂಜಾ ಕೈಂಕರ್ಯ ನೆರವೇರಿಸಿದ ಪುರೋಹಿತ ಮುಕುಂದಾಚಾರ್ಯರು ಮಾತನಾಡಿ, ವಿಶ್ವಕರ್ಮ ಪೂಜೆಯ ಮಹತ್ವ, ಮಹೋತ್ಸವ ಹಾಗೂ ಜಯಂತಿ ಶಬ್ದಗಳ ಅರ್ಥವನ್ನು ವಿವರಿಸಿದರು.

ಅತಿಥಿಗಳಾಗಿದ್ದ ಶ್ರೀ ಅಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ವಿಶ್ವಬ್ರಾಹ್ಮಣ ಸಂಸ್ಕೃತಿಯ ಬಗ್ಗೆ ತಮ್ಮಅನುಭವದ ಮಾತುಗಳನ್ನು ಆಡಿದರು. ಮಸ್ಕತ್ಗೆ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಒಕ್ಕೂಟದ ಒಗ್ಗಟ್ಟಿನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಹೇಶ ಪುರೋಹಿತರು ಸ್ವಾಮೀಜಿಯವರ ಆಗಮನಕ್ಕೆ ಸಂತಸ ಹಂಚಿಕೊಂಡರು.

ಒಕ್ಕೂಟದ ಮಹಿಳೆಯರು ಪ್ರಾರ್ಥನೆ ಹಾಡಿದರು. ಹರಿಶ್ಚಂದ್ರ ಆಚಾರ್ಯ ಕೇಂಜರ ಅವರು ಸ್ವಾಗತಿಸಿದರು. ಸುಧಾಕರ ಪಾಂಚಾಲರು ಹಾಗೂ ಗಣೇಶ ಆಚಾರ್ಯ ಅವರು ಸ್ವಾಮೀಜಿಗಳ ಪರಿಚಯ ಮಾಡಿದರು. ಪದ್ಮನಾಭ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಪ್ರೀತಿ ರಾಮಚಂದ್ರ ಆಚಾರ್ಯರು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net