

ಔರಾದ್: ತನ್ನ ಪ್ರಾಣವನ್ನು ಒತ್ತೆಯಿಟ್ಟು ದೇಶ ರಕ್ಷಣೆ ಮಾಡುವ ಯೋಧನ ಸೇವೆ ಅನನ್ಯ. ಅವರನ್ನು ಸನ್ಮಾನಿಸುವುದು ನಾವು ತೋರಿಸುವ ಅಳಿಲು ಸೇವೆಯಾಗಿದೆ ಭಾಲ್ಕಿಯ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ನುಡಿದರು.
ಭಾರತೀಯ ಸೇನೆಯಲ್ಲಿ ೨೨ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಭಾನುವಾರ ಸ್ವಗ್ರಾಮ ಮಸ್ಕಲ್ ಗೆ ಆಗಮಿಸಿದ ಯೋಧ ರಾಚಪ್ಪ ಇಸ್ಲಾಂಪುರೆ ಅವರನ್ನು ಸನ್ಮಾನಿಸಿ ಆಶೀರ್ವದಿಸಿದ ಮಾತನಾಡಿದ ಶ್ರೀಗಳು, ಮುಂದಿನ ಪೀಳಿಗೆಯೂ ಸಹ ದೇಶ ಸೇವೆ ಮಾಡಲು ಮುಂದೆ ಬರಬೇಕಾದರೇ ಇಂತಹ ಮಹಾನ್ ಯೋಧರ ಪ್ರೇರಣೆ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಪ್ರತಿಯೊಬ್ಬರೂ ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ಗ್ರಾಮದ ಯುವಕರು, ಹಳೆಯ ಶಾಲಾ ವಿದ್ಯಾರ್ಥಿಗಳ ಬಳಗ, ದೇಶಾಭಿಮಾನಿಗಳ ಬಳಗದವರು ತಾಲೂಕಿನ ಸಂತಪುರ ಬಸವೇಶ್ವರ ವೃತ್ತದಲ್ಲಿ ಅದ್ದೂರಿಯಾಗಿ ಬರಮಾಡಿಕೊಂಡು ಮೂರು ಕಿಮಿಗಳ ಬೈಕ್ ರ‍್ಯಾಲಿ ಮೂಲಕ ಮೆರವಣಿಗೆ ಮಾಡಿದರು.
ಮಾಜಿ ಸೈನಿಕ ಸಂಘದ ಜಿಲ್ಲಾಧ್ಯಕ್ಷ ಪಾಂಡಪ್ಪ ಮೇತ್ರೆ, ಗ್ರಾಪಂ ಅಧ್ಯಕ್ಷೆ ಮಹಾದೇವಿ ಪಾಟೀಲ್, ಚನ್ನಬಸವ ಹೇಡೆ, ಸಿದ್ರಾಮ ಪಾಟೀಲ್, ತಾಪಂ ಇಒ ಶಿವಕುಮಾರ್ ಘಾಟೆ, ನಾಗೇಶ ಸ್ವಾಮಿ, ರಾಜು, ಲಿಂಗರಾಜ ಪಾಟೀಲ್, ಶಿವಕುಮಾರ, ಬಸವರಾಜ ಲಕ್ಸೆಟ್ಟೆ, ಬಾಬುರೆಡ್ಡಿ, ಡಾ.ಸಂಜುಕುಮಾರ ಜುಮ್ಮಾ, ಗುರುನ್ನಾಥ ದೇಶಮುಖ, ಮನೋಹರ ಬಿರಾದಾರ, ನಂದಾದೀಪ ಬೋರಾಳೆ, ಮೈನೋದ್ದಿನ್, ಶರಣಬಸವ, ವೀರೇಶ ಖತಗಾಂವೆ, ರಮೇಶ ಇತರರಿದ್ದರು.