‘ಮಾಸ್ಕ್ ಹಾಕ್ಕೊಳ್ರಯ್ಯ’ ಎಂದಿದ್ದಕ್ಕೆ ಪೊಲೀಸಪ್ಪನ ಬಟ್ಟೆ ಹರಿದು ಹಲ್ಲೆ!

uploadweb
Published on

ಚಿಂತಾಮಣಿ: ‘ಗುಂಪು ಸೇರಬೇಡಿ, ಮಾಸ್ಕ್ ಹಾಕೊಳ್ಳಿ’ ಎಂದು ಬುದ್ದಿ ಹೇಳಿದ ಪೊಲೀಸಪ್ಪನೇ ತೀವ್ರ ಹಲ್ಲೆಗೆ ಒಳಗಾದ ಘಟನೆ ನಡೆದಿದ್ದು, ಹಲ್ಲೆ ಮಾಡಿದ ವ್ಯಕ್ತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಇಲ್ಲಿನ ಗ್ರಾಮಾಂತರ ಠಾಣೆ ಪೇದೆಗಳಾದ ಅಂಜನ್ ರೆಡ್ಡಿ ಮತ್ತು ರಾಮಚಂದ್ರ ಭಾನುವಾರ ಗಸ್ತು ಕರ್ತವ್ಯದಲ್ಲಿದ್ದರು. ಕೋಲಾರ, ಚಿಂತಾಮಣಿ ರಸ್ತೆಯಲ್ಲಿ ದ್ವಿಚಕ್ರವಾಹನದಲ್ಲಿ ಮಧ್ಯಾಹ್ನ ಹೋಗುವಾಗ ಕುರುಟುಹಳ್ಳಿ ಕ್ರಾಸ್ ಬಳಿ ಇರುವ ಮದೀನಾ ಬೇಕರಿ ಮುಂಭಾಗ ಕೆಲವು ಯುವಕರು ಗುಂಪಾಗಿ ಕುಳಿತಿದ್ದರು.

ಅಲ್ಲಿಗೆ ಹೋದ ಪೇದೆಗಳು ‘‘ಎಲ್ಲೆಡೆ ಕರೊನಾ ಹರಡುತ್ತಿದೆ, ನೀವು ಹೀಗೆ ಗುಂಪುಗುಂಪಾಗಿ ಕುಳಿತುಕೊಳ್ಳುವುದು ಸರಿಯಲ್ಲ. ಅಷ್ಟೇ ಅಲ್ಲ, ಪ್ರತಿಯೊಬ್ಬರೂ ಮಾಸ್ಕ್ ಹಾಕಿಕೊಳ್ಳಬೇಕು’’ ಎಂದು ಬುದ್ಧಿವಾದ ಹೇಳಿದರು.

ಇದಕ್ಕೆ ಆ ಗುಂಪಿನಲ್ಲಿದ್ದವರು ಕೇರ್ ಮಾಡಿಲ್ಲ. ಮತ್ತೆ ಗದರಿಸಿ ಹೇಳಿದಾಗ, ಆ ಗುಂಪಿನಲ್ಲಿದ್ದ ಶೇಷಾದ್ರಿ ಎಂಬಾತ ಸಿಟ್ಟಿನಿಂದ ಪೇದೆಗಳ ಮೇಲೆರಗಿದ್ದಾನೆ. ಆಂಜನ್ ರೆಡ್ಡಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಮೇಲೆ ಹಲ್ಲೆ ಮಾಡಿ ಸಮವಸ್ತ್ರ ಹರಿದು ಹಾಕಿದ್ದಾನೆ.

ಗಾಯಗೊಂಡ ಅಂಜನ್‌ರೆಡ್ಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರು ನೀಡಿದ ಹೇಳಿಕೆ ಆಧರಿಸಿ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿ ಶೇಷಾದ್ರಿಯನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net