

ಕುಕನೂರು: ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇಲ್ಲದಿದ್ದರೆ ದಂಡ ಕಟ್ಟಿಟ್ಟ ಬುತ್ತಿ ಎಂದು ಪಿಎಸ್‌ಐ ಎನ್.ವೆಂಕಟೇಶ ಹೇಳಿದರು. ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಮಾಸ್ಕ್ ಧರಿಸದೆ ಸಂಚರಿಸುವವರ ವಿರುದ್ಧ ಗುರುವಾರ ದಂಡ ಹಾಕುವುದರೊಂದಿಗೆ ಎಚ್ಚರಿಕೆ ನೀಡಿದರು.
ಕರೊನಾ ಸೋಂಕಿನ ಹರಡುವಿಕೆಯಲ್ಲಿ ಜನತೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಸರ್ಕಾರದ ಆದೇಶ ಪಾಲನೆ ಪ್ರತಿಯೊಬ್ಬರ ಕರ್ತವ್ಯ. ಮಾಸ್ಕ್ ಧರಿಸದೆ ಸಂಚರಿಸಿದರೆ ವಾಹನ ಜಪ್ತಿ ಮಾಡಲಾಗುವುದು. ಒಮ್ಮೆ ಮಾಸ್ಕ್ ಧರಿಸದೆ ಸಂಚರಿಸಿದ ವಾಹನಕ್ಕೆ ರೆಡ್ ಮಾರ್ಕ್ ಮೂಲಕ ಗುರುತು ಮಾಡಿ, ಇನ್ನೊಮ್ಮೆ ಅದೇ ವಾಹನ ಕಂಡರೆ ಮುಲಾಜಿಲ್ಲದೆ ಠಾಣೆ ವ್ಯಾಪ್ತಿಗೆ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಎಎಸ್‌ಐಗಳಾದ ಮಲ್ಲೇಶಪ್ಪ, ರಾಮಚಂದ್ರ ಮುರಾರಿ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.
ಮಧ್ಯಾಹ್ನ 2 ಗಂಟೆಗೆ ಬಂದ್: ಪಟ್ಟಣದ ಅಂಗಡಿ ವ್ಯಾಪಾರವನ್ನು ಮಧ್ಯಾಹ್ನ 2 ಗಂಟೆಗೆ ಬಂದ್ ಮಾಡಲಾಗುತ್ತದೆ. 2 ಗಂಟೆ ನಂತರ ಅನಾವಶ್ಯಕವಾಗಿ ಯಾರೊಬ್ಬರೂ ತಿರುಗಾಡುವಂತ್ತಿಲ್ಲ. ಕರೊನಾ ಕಟ್ಟೆಚ್ಚರ ಪಾಲನೆಯಲ್ಲಿ ಕುಕನೂರಿನಲ್ಲಿ ಉತ್ತಮ ಪ್ರತಿಕ್ರಿಯೆ ಕಾಣಸಿಗುತ್ತಿದೆ ಎಂದು ಪಿಎಸ್‌ಐ ತಿಳಿಸಿದರು.