

ಹುಬ್ಬಳ್ಳಿ: ಕೋವಿಡ್ ಕಿರಿಕಿರಿ ಹೆಚ್ಚುತ್ತಿದ್ದಂತೆ ಸುರಕ್ಷತಾ ಕ್ರಮಗಳ ಪಾಲನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಆದೇಶಿಸಿದೆ. ಅದರಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವಿಕೆ ಹೆಚ್ಚುತ್ತಿದೆ. ಕೆಲವೆಡೆ ಅತಿರೇಕಕ್ಕೂ ಹೋಗಿ, ಯಾರದೋ ತಪ್ಪಿಗೆ ಇನ್ನಾರಿಗೋ ಶಿಕ್ಷೆ ವಿಧಿಸಲಾಗುತ್ತಿದೆ ಎಂಬ ಆರೋಪ ಕೇಳಿಬರತೊಡಗಿದೆ.
ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಹಾಕದಿದ್ದರೆ 250 ರೂಪಾಯಿ ದಂಡ ವಿಧಿಸಲಾಗುತ್ತಿದೆ. ಪಾಲಿಕೆಯ ಅಧಿಕಾರಿಗಳು ಮಾರುಕಟ್ಟೆಗಳ ಮಧ್ಯೆ ಓಡಾಡಿ, ಮಾಸ್ಕ್ ಹಾಕದವರನ್ನು ಹಿಡಿದು ದಂಡಕ್ಕೆ ಗುರಿಪಡಿಸತೊಡಗಿದ್ದಾರೆ. ಅವರಿಗೆ ಸುಲಭವಾಗಿ ಸಿಗುವವರು ಮಾಸ್ಕ್ ಧರಿಸಿರದ ಅಂಗಡಿಕಾರರು. ಏಕೆಂದರೆ, ಅಂಗಡಿಯವರು ಪೇಟೆಗೆ ಬಂದ ಜನಸಾಮಾನ್ಯರಂತೆ ತಪ್ಪಿಸಿಕೊಂಡು ಓಡಿಹೋಗಲು ಆಗದು.
ಶುಕ್ರವಾರ ಪಾಲಿಕೆಯ ಕೆಲ ಅಧಿಕಾರಿಗಳು ಅಂಗಡಿಕಾರರಿಗೆ ದಂಡ ಹಾಕಿರುವುದಷ್ಟೇ ಅಲ್ಲದೆ, ಅಂಗಡಿಗೆ ಬಂದ ಗಿರಾಕಿಗಳಲ್ಲಿ ಎಷ್ಟು ಜನ ಮಾಸ್ಕ್ ಧರಿಸಿಲ್ಲ ಎಂದು ಲೆಕ್ಕ ಮಾಡಿ, ಅವರ ಪಾಲಿನ ದಂಡವನ್ನೂ ವ್ಯಾಪಾರಿಯಿಂದಲೇ ವಸೂಲಿ ಮಾಡಿದ್ದಾರೆ! ಇದೆಂಥ ನ್ಯಾಯ ಎಂದು ವ್ಯಾಪಾರಿ ಪ್ರಶ್ನಿಸಿದಾಗ, ‘ಹೊಸ ಮಾರ್ಗಸೂಚಿ ಬಂದಿದೆ. ಅದರ ಪ್ರಕಾರ, ಅಂಗಡಿಗೆ ಬಂದವರಲ್ಲಿ ನೀನು ಜಾಗೃತಿ ಮೂಡಿಸಿ ಮಾಸ್ಕ್ ಹಾಕಿಕೊಳ್ಳಲು ಹೇಳಬೇಕಿತ್ತು. ಹಾಗೆ ಮಾಡದೆ ಇದ್ದುದಕ್ಕೆ ನಿನಗೇ ದಂಡ ವಿಧಿಸುವಂತೆ ಸೂಚನೆ ಇದೆ. ಆದ್ದರಿಂದ ದಂಡ ಕಟ್ಟು’ ಎಂದು ಹೇಳಿದ್ದಾರಂತೆ. ಪಾಲಿಕೆ ಅಧಿಕಾರಿಗಳನ್ನು ಎದುರು ಹಾಕಿಕೊಂಡರೆ ಇನ್ನೊಂದು ದಿನ ಇನ್ನೇನೋ ಕಾರಣ ನೀಡಿ ದಂಡ/ಕೇಸ್ ಹಾಕಬಹುದು ಎಂಬ ಭಯದಲ್ಲಿ ಕೆಲ ಅಂಗಡಿಕಾರರು, ಗ್ರಾಹಕರ ಲೆಕ್ಕದ ದಂಡವನ್ನೂ ಸೇರಿಸಿ ಸಾವಿರಗಟ್ಟಲೇ ರೂಪಾಯಿ ತೆತ್ತು ಕಳುಹಿಸಿದ್ದಾರೆ.
‘ನಾನು ಮಾಸ್ಕ್ ಹಾಕಿಕೊಳ್ಳದೆ ಇದ್ದುದು ತಪ್ಪು ಎಂದಿಟ್ಟುಕೊಳ್ಳೋಣ. ನನಗೆ 250 ರೂಪಾಯಿ ದಂಡ ಹಾಕಲಿ. ಆದರೆ, ಅಂಗಡಿ ಎದುರು ಬಂದು ನಿಂತ ವ್ಯಕ್ತಿಗಳು ಮುಖಗವಸು ಹಾಕಿಕೊಳ್ಳದೇ ಇದ್ದುದಕ್ಕೂ ನನ್ನನ್ನು ಹೊಣೆ ಮಾಡಿದರೆ ಹೇಗೆ? ಒಂದು ವರ್ಷದಿಂದ ವ್ಯಾಪಾರ ಮಂದವಾಗಿದೆ. ನಾನೂ ಕಷ್ಟದಲ್ಲಿದ್ದೇನೆ. ಹೀಗಿರುವಾಗ ಇಲ್ಲದ ನಿಯಮ ತಂದು ನಮ್ಮ ತಲೆ ಮೇಲೆ ಹೇರಿದರೆ, ಉದ್ಯೋಗ ನಡೆಸುವುದು ಹೇಗೆ? ಯಾರು ಮಾಸ್ಕ್ ಹಾಕಿಲ್ಲವೋ ಅವರಿಗೇ ದಂಡ ಹಾಕಬೇಕಾದುದು ನ್ಯಾಯವಲ್ಲವೆ’? ಎಂದು ಅಂಗಡಿಕಾರರೊಬ್ಬರು ಪತ್ರಿಕೆ ಬಳಿ ಅಳಲು ತೋಡಿಕೊಂಡರು.
ಅಧಿಕಾರಿಗಳ ಸಮಜಾಯಿಷಿಯೇ ಬೇರೆ. ಮಾ. 24ರಂದು ಸರ್ಕಾರ ಪರಿಷ್ಕೃತ ಸುತ್ತೋಲೆ ಹೊರಡಿಸಿದೆ. ಅದರಲ್ಲಿ, ಮಾಸ್ಕ್ ಧಾರಣೆ ಮತ್ತು ಸುರಕ್ಷಿತ ಅಂತರ ನಿರ್ವಹಣೆಯ ಪಾಲನೆ ಆಯಾ ಜಾಗದ ಮಾಲೀಕರ ಕರ್ತವ್ಯ ಎಂದು ತಿಳಿಸಲಾಗಿದೆ. ಆದ್ದರಿಂದ, ಅಂಗಡಿಗೆ ಬಂದ ಗಿರಾಕಿಗಳು ಮಾಸ್ಕ್ ಹಾಕಿಕೊಳ್ಳುವಂತೆ ಸೂಚಿಸದಿದ್ದರೆ ಅಂಗಡಿಕಾರನೇ ಹೊಣೆಯಾಗುತ್ತಾನೆ. ಹಾಗೆಯೇ ಕಲ್ಯಾಣ ಮಂಟಪ, ಛತ್ರ, ಸಭಾಭವನ ಇತ್ಯಾದಿಗಳಲ್ಲಿ ಮದುವೆ, ಜನ್ಮದಿನಾಚರಣೆ ಸಮಾರಂಭ ಇತ್ಯಾದಿಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚಿನ ಜನರು ಪಾಲ್ಗೊಂಡಲ್ಲಿ ಜಾಗದ ಮಾಲೀಕ ಸಹ ಜವಾಬ್ದಾರನಾಗುತ್ತಾರೆ ಎನ್ನುವುದು ಅಧಿಕಾರಿಗಳ ವಾದ.
ಸುತ್ತೋಲೆಯಲ್ಲಿ ಹೇಳಿರುವುದೆಲ್ಲ ಛತ್ರ, ಸಭಾಭವನಗಳಿಗೆ ಹೊರತು ಸಣ್ಣ/ಸಾಮಾನ್ಯ ಅಂಗಡಿ ಮಳಿಗೆಗಳಿಗೆ ಅಲ್ಲ. ಆದ್ದರಿಂದ ಪಾಲಿಕೆ ಅಧಿಕಾರಿಗಳು ಸುತ್ತೋಲೆಯನ್ನು ಅರ್ಥೈಸಿಕೊಂಡಿದ್ದು ಸರಿಯೇ ಎಂದು ಸ್ಪಷ್ಟಪಡಿಸುವಂತೆ ಸಂಘದ ಮೂಲಕ ಡಿ.ಸಿ.ಯವರನ್ನು ಕೇಳಿಕೊಳ್ಳಲಿದ್ದೇವೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಗರಂ ಆಗಿದ್ದರು ಡಿಸಿ
ಮಾಸ್ಕ್ ಧರಿಸದವರಿಗೆ ದಂಡ ಹಾಕುವ ವಿಷಯದಲ್ಲಿ ಮಹಾನಗರ ಪಾಲಿಕೆ ಗಂಭೀರವಾಗಿ ನಡೆದುಕೊಂಡಿಲ್ಲ ಎಂದು ಕೆಲ ದಿನಗಳ ಹಿಂದೆ ಕರೆದ ಸಭೆಯಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಗರಂ ಆಗಿದ್ದರು. ಈ ವಿಷಯವಾಗಿ ಪಾಲಿಕೆಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು ಎಂದೂ ಹೇಳಿದ್ದರು. ತದನಂತರದಲ್ಲಿ ಪಾಲಿಕೆಯವರು ದಂಡ ವಿಧಿಸುವುದನ್ನು ಚುರುಕುಗೊಳಿಸುತ್ತಿದ್ದಾರೆ.
ಇವರಿಗೆ ಯಾರು ಹಾಕಬೇಕು ದಂಡ?
ಈ ಚಿತ್ರ ನೋಡಿ. ಇದು ನಗರದ ಹೊಸೂರಿನಲ್ಲಿರುವ ಮಹಾನಗರ ಪಾಲಿಕೆಯ ವಲಯ ಕಚೇರಿ 5ರ ಫೋಟೋ. ಇಲ್ಲಿ ಪಾಲಿಕೆಯ ಸಿಬ್ಬಂದಿಯೇ ಮಾಸ್ಕ್ ಧರಿಸಿಲ್ಲ. ಇನ್ನು ಮಾಸ್ಕ್ ಧರಿಸಿದ ಕೆಲವರು ಅದನ್ನು ಕಾಟಾಚಾರಕ್ಕೆ ಎಂಬಂತೆ ಹಾಕಿಕೊಂಡಿದ್ದಾರೆ. ಅಂತರವನ್ನು ಕೂಡ ಕಾಪಾಡಿಕೊಳ್ಳದೆಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಪಾಲಿಕೆಯ ಬಹುತೇಕ ಕಚೇರಿಗಳಲ್ಲಿ ಇದೇ ರೀತಿಯ ಪರಿಸ್ಥಿತಿ ಇದೆ. ಅವಳಿ ನಗರದ ಎಲ್ಲೆಡೆ ಮಾಸ್ಕ್ ಧರಿಸದವರಿಗೆ ದಂಡ ಹಾಕುತ್ತಿರುವವರ ಕಚೇರಿಗಳಲ್ಲಿಯೇ ಕೋವಿಡ್ ನಿಯಮಾವಳಿಗಳು ಯಥೇಚ್ಛವಾಗಿ ಉಲ್ಲಂಘನೆಯಾಗುತ್ತಿರುವುದು ವಿಪರ್ಯಾಸವಾಗಿದೆ. ಇವರಿಗೆ ಬುದ್ಧಿ ಹೇಳುವವರಾರು? ದಂಡ ಹಾಕುವವರಾರು ಎಂದು ಸಾರ್ವಜನಿಕರು ಲೇವಡಿ ಮಾಡುತ್ತಿದ್ದಾರೆ.
ಸರ್ಕಾರದ ಮಾರ್ಗಸೂಚಿ ಪ್ರಕಾರ ಸ್ಥಳದ ಮಾಲೀಕರಿಗೂ ಜವಾಬ್ದಾರಿ ಇದೆ. ಮಾಸ್ಕ್ ಧರಿಸದ ಗ್ರಾಹಕರಿಗೆ ವಸ್ತುಗಳನ್ನು ಕೊಡುವುದಿಲ್ಲ ಎಂಬಂಥ ನಿಯಮಗಳನ್ನು ಈಗ ಬಹುತೇಕ ಯಾರೂ ಪಾಲಿಸುತ್ತಿಲ್ಲ. ಹೀಗಾಗಿ, ಗ್ರಾಹಕರಲ್ಲಿ ಅರಿವು ಮೂಡಿಸದಿರುವ ಅಂಗಡಿಕಾರ, ಸ್ಥಳದ ಮಾಲೀಕರನ್ನೇ ಹೊಣೆಗಾರರನ್ನಾಗಿಸಿ ಆರೋಗ್ಯ ನಿರೀಕ್ಷಕರು, ಬಿಲ್ ಕಲೆಕ್ಟರ್ಗಳು ದಂಡ ಹಾಕಿರಬಹುದು.| ಶರಣಬಸಪ್ಪ ಕೆಂಭಾವಿ,ಪಾಲಿಕೆ 7ನೇ ವಲಯ ಕಚೇರಿ ಸಹಾಯಕ ಆಯುಕ್ತ