

ಚಿಕ್ಕಮಗಳೂರು: ಪ್ರವಾಸಿಗರೇ ಚಿಕ್ಕಮಗಳೂರು ಜಿಲ್ಲೆಗೆ ಸಮಸೆಯಾಗಿದ್ದು, ಸೋಂಕು ಅವರಿಂದಲೇ ವ್ಯಾಪಿಸುವ ಭೀತಿ ಕಾಡುತ್ತಿದೆ. ಲಾಕ್ಡೌನ್ ಹಂತ ಹಂತವಾಗಿ ಸಡಿಲಿಕೆ ಮಾಡುತ್ತಿದ್ದಂತೆ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಅಧಿಕವಾಗಿದ್ದು, ಅವರು ಕರೊನಾ ಮಾರ್ಗಸೂಚಿ ಪಾಲನೆ ಮಾಡದಿರುವುದೇ ದೊಡ್ಡ ಸಮಸ್ಯೆ.
ಪ್ರವಾಸಿಗರಲ್ಲಿ ಪ್ರತಿಶತ 60ಕ್ಕೂ ಹೆಚ್ಚು ಜನ ಮಾಸ್ಕ್ ಧರಿಸುವುದಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಿಲ್ಲ. ಗುಂಪು ಗುಂಪಾಗಿ ಸುತ್ತಾಡಿಕೊಂಡು ಪೊಲೀಸರು ಅಡ್ಡಗಟ್ಟಿದಾಗ ದಂಡ ಕಟ್ಟಿ ತೆರಳುತ್ತಿದ್ದಾರೆ. ಹೊರ ಜಿಲ್ಲೆಯಿಂದ ಬಂದಿದ್ದ ಪ್ರವಾಸಿಗರಲ್ಲಿ ಬಹುತೇಕರು ಹೊರವಲಯದ ಹೋಟೆಲ್ಗಳಲ್ಲಿ ಹತ್ತಾರು ಜನ ಒಟ್ಟಿಗೆ ಕುಳಿತು ಹಸಿವು ನೀಗಿಸಿಕೊಂಡು ನಂತರ ಬೀಡಿ, ಸಿಗರೇಟ್ ಸೇದಿ, ಗುಟ್ಕಾ ತಿಂದು ಉಗುಳುವ ದೃಶ್ಯಗಳು ಸಾಮಾನ್ಯವಾಗಿವೆ.
ಎಪಿಎಂಸಿ ಮಾರುಕಟ್ಟೆ ನಿತ್ಯ ಜನ ಜಂಗುಳಿಯಿಂದ ಕೂಡಿದ್ದು ವರ್ತಕರು ತರಕಾರಿ ವ್ಯಾಪಾರಕ್ಕೆ ಮುಂದಾದರೆ ದೈಹಿಕ ಅಂತರವಿಲ್ಲದೆ ಕರೊನಾದ ಯೋಚನೆಯೂ ಇಲ್ಲದಂತೆ ವಹಿವಾಟು ನಡೆಯುತ್ತಿದೆ. ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಮಾಸ್ಕ್ ಧರಿಸಿದ್ದರೂ ಕೆಲವೊಂದು ವಾಹನದಲ್ಲಿ ಅಂತರ ಕಾಪಾಡಿಕೊಳ್ಳುವುದನ್ನು ಮರೆತು ಸಾಗುತ್ತಿದ್ದಾರೆ. ಖಾಸಗಿ ವಾಹನದಲ್ಲಿ ನಿಯಮ ಗಾಳಿಗೆ ತೂರಿದಂತಿದೆ.
ನಗರದಲ್ಲಿ ಹಬ್ಬದ ಕಳೆಗಟ್ಟಿದ್ದು ಬಹಳಷ್ಟು ಅಂಗಡಿಗಳಲ್ಲಿ ಖರೀದಿ ಭರಾಟೆ ಜೋರಾಗಿದೆ. ಮದುವೆ ಮತ್ತಿತರ ಶುಭ ಸಮಾರಂಭಗಳಿಗೆ ಸಭೆ ಸಮಾರಂಭಗಳಿಗೆ ಸರ್ಕಾರ ವಿಧಿಸಿರುವ ನಿಬಂಧನೆಗಳು ಪಾಲನೆಯಾಗುತ್ತಿಲ್ಲ.
ಸಚಿವರು, ಜನ ಪ್ರತಿನಿಧಿಗಳು ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಂದರ್ಭ ಮುಖ ಕಾಣಬೇಕೆಂದು ಮಾಸ್ಕನ್ನು ತೆಗೆಯುತ್ತಾರೆ. ಅವರೊಂದಿಗೆ ಅನೇಕರು ಸೆಲ್ಪಿ ತೆಗೆದುಕೊಳ್ಳುವ ಕೊಳ್ಳುವ ಭರದಲ್ಲಿ ಕರೊನಾ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ.
ಜಿಲ್ಲೆಯ ಕೆಲವು ದೇವಸ್ಥಾನ, ಮಸೀದಿ, ಚರ್ಚ್ಗಳಲ್ಲಿ ಭಕ್ತರು ಮಾಸ್ಕ್ ಧರಿಸಿದರೂ ದೈಹಿಕ ಅಂತರ ಕಾಪಾಡಿಕೊಳ್ಳುವಲ್ಲಿ ನಿರ್ಲಕ್ಷ ವಹಿಸಿದ್ದಾರೆಂಬುದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವ ವೀಡಿಯೊ, ಛಾಯಾಚಿತ್ರಗಳಲ್ಲಿ ಬಹಿರಂಗವಾಗಿದೆ. ಮದ್ಯವ್ಯಸನಿಗಳು ಮಾಸ್ಕ್ ಬಗ್ಗೆ ಗಮನಹರಿದೆ ವೈನ್ಸ್ ಗಳಲ್ಲಿ ಮದ್ಯ ಖರೀದಿಸಿ ಕೆಲವರು ಓಣಿಗಳಲ್ಲಿ ಕುಡಿದು ಪ್ಯಾಕೇಟ್ ಎಸೆದು ಕರೊನಾ ಚಿಂತೆಯಿಲ್ಲದೆ ರಸ್ತೆ ಯಲ್ಲಿ ತೂರಾಡುತ್ತ ಸಾಗುತ್ತಿದ್ದಾರೆ.
ಬಾಡೂಟ ಜೋರು: ತರೀಕೆರೆ ಪಟ್ಟಣದಲ್ಲಿ ಕರೊನಾ ಸೋಂಕಿತರು ಎಲ್ಲೆಂದರಲ್ಲಿ ಓಡಾಡುತ್ತಿದ್ದು ನಿಯಮಗಳ ಬಗ್ಗೆ ಎಚ್ಚರವಿಲ್ಲದಂತಾಗಿದೆ. ತಾಲೂಕಿನ ಕರಕುಚ್ಚಿ, ಲಕ್ಕವಳ್ಳಿ ಸೇರಿದಂತೆ ಕೆಲವು ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಆರಾಧನೆ ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಾಲ್ಗೊಂಡು ಬಾಡೂಟ ಸವಿಯುವ ಭರದಲ್ಲಿ ಪರಸ್ಪರ ಅಂತರ ಮರೆತು ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ ದೂರುಗಳ ಸುರಿಮಳೆಯೇ ಇದೆ.
ಹೂವಿನ ಮಾರುಕಟ್ಟೆಯಲ್ಲಿ ದಟ್ಟಣೆ: ಕಡೂರು ಪಟ್ಟಣದ ಎಪಿಎಂಸಿ, ಮುಖ್ಯ ವೃತ್ತದಲ್ಲಿರುವ ಹೂವಿನ ಮಾರುಕಟ್ಟೆಯಲ್ಲಿ ನಿತ್ಯ ದಟ್ಟಣೆ ಹೆಚ್ಚಿದ್ದು ದೈಹಿಕ ಅಂತರ ಕಾಪಾಡುವ ಕಡೆ ಗಮನವೆ ಇಲ್ಲದಂತಾಗಿದೆ. ಕರೊನಾ ಸೇನಾನಿಗಳು ಜಾಗೃತಿ ಮೂಡಿಸುತ್ತಿದ್ದರೂ ಹೋಟೆಲ್, ರಸ್ತೆ ಬದಿ ಅಂಗಡಿಗಳಲ್ಲಿ ಜನ ಗುಂಪು ಸೇರುವುದು ಕಡಿಮೆಯಾಗಿಲ್ಲ.
ದೇವಾಲಯಕ್ಕೆ ಎಂಟ್ರಿ ಇಲ್ಲ: ಶೃಂಗೇರಿಯಲ್ಲಿ ವೈದ್ಯರು ಎಚ್ಚೆತ್ತುಕೊಂಡು ಆಶಾ ಕಾರ್ಯಕರ್ತೆಯರ ಸಹಕಾರದಲ್ಲಿ ಮನೆಗಳಿಗೆ ತೆರಳಿ ಅರಿವು ಮೂಡಿಸುತ್ತಿದ್ದು ಬಹುತೇಕರು ಮಾಸ್ಕ್ ಹಾಕಿ ಓಡಾಡುತ್ತಿದ್ದಾರೆ. ಶಾರದಾಂಬೆ ಸನ್ನಿಧಿಗೆ ಬರುವ ಪ್ರವಾಸಿಗರಿಗೆ ಸ್ಕ್ರೀನಿಂಗ್ ಸೇರಿ ಸೋಂಕು ತಡೆಗಟ್ಟಲು ನಿಯಮ ಪಾಲನೆ ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಇಲ್ಲದೆ ಬಂದವರಿಗೆ ದೇವಾಲಯಕ್ಕೆ ಪ್ರವೇಶ ನೀಡುತ್ತಿಲ್ಲ.
ಮಾಸ್ಕ್ ಇಲ್ಲದವರಿಗೆ ದಂಡ: ಎನ್ಆರ್ ಪುರ ದಲ್ಲಿ ಕರೊನಾ ಭೀತಿಯಿಂದ ಜನ ಹಲವಷ್ಟು ನಿಯಮಗಳನ್ನು ಪಾಲಿಸುತ್ತಿದ್ದು ಮಾಸ್ಕ್ ಧರಿಸದಿರುವವರಿಗೆ ಪೊಲೀಸರು ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ದಂಡ ವಿಧಿಸುತ್ತಿದ್ದಾರೆ.
ಪರಸ್ಪರ ಅಂತರದ್ದೇ ಸಮಸ್ಯೆ: ಕೊಪ್ಪ ಪಟ್ಟಣದಲ್ಲಿ ಜನ ಮಾಸ್ಕ್ ಧರಿಸುವುದಕ್ಕೆ ಮುಂದಾಗಿದ್ದಾರೆ. ಆದರೆ ಪರಸ್ಪರ ಅಂತರ ಕಾಪಾಡುವಲ್ಲಿ ನಿರ್ಲಕ್ಷ ತೋರಿದ್ದಾರೆ. ಬೀರೂರು-ಉಡುಪಿ ಮಾರ್ಗದ ಬಸ್ಗಳಲ್ಲಿ ಜನದಟ್ಟಣೆ ಇರುತ್ತದೆ. ಸಭೆ ಸಮಾರಂಭಗಳಲ್ಲಿ ನೂರಾರು ಜನ ಸೇರುತ್ತಾರೆ ಅಂತರ ಕಾಯ್ದುಕೊಳ್ಳಬೇಕೆಂಬ ಗೋಜಿಗೆ ಹೋಗುತ್ತಿಲ್ಲ. ಸಣ್ಣ ಕ್ಯಾಂಟೀನ್, ಟೀ ಅಂಗಂಡಿಗಳಲ್ಲಿ ಕುಳಿತು ಧೂಮಪಾನ ಮಾಡುತ್ತಿದ್ದು ಸಾರ್ವಜನಿಕರಿಗೆ ಕಿರಿಕಿರಿಯಾಗಿದೆ.
ಮದುವೆ ಮನೆಯಲ್ಲಿ ದಂಡ: ನಿಯಮ ಗಾಳಿಗೆ ತೂರಿ 300-400 ಜನರನ್ನು ಸೇರಿಸಿ ಮೂಡಿಗೆರೆಪಟ್ಟಣದಲ್ಲಿ ನಡೆಯುತ್ತಿದ್ದ 9 ಮದುವೆ ಸಮಾರಂಭಕ್ಕೆ ತೆರಳಿ ಪೊಲೀಸರು 1.75 ಲಕ್ಷರೂ ದಂಡ ವಿಧಿಸಿದ್ದಾರೆ. ಪಟ್ಟಣದಲ್ಲಿ ಮಾಸ್ಕ್ ಧರಿಸದವರಿಗೆ 42 ಸಾವಿರೂ ಫೈನ್ ಹಾಕಲಾಗಿದೆ . ಆದರೂ ಜನಮಾತ್ರ ಕಾರ್ಯಕ್ರಮಗಳಲ್ಲಿ ದೈಹಿಕ ಅಂತರ ಮರೆತಿರುವುದು ವಿಪರ್ಯಾಸವೇ ಸರಿ.