

ಉಡುಪಿ: ಮಣಿಪಾಲ ಮಾಧವ ಕೃಪಾ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಇಶಿತಾ ಆಚಾರ್ ಲಾಕ್‌ಡೌನ್ ಅವಧಿಯಲ್ಲಿ ಸುಮಾರು 300 ಮಾಸ್ಕ್‌ಗಳನ್ನು ಹೊಲಿದು ಸೈನಿಕರಿಗೆ ರವಾನಿಸಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶ್ಲಾಘಿಸಿದ್ದಾರೆ.
ಈ ಕುರಿತು ವಿದ್ಯಾರ್ಥಿನಿ ತಾಯಿ ನಂದಿತಾ ಆಚಾರ್ ಅವರಿಗೆ ಪತ್ರ ಬರೆದಿರುವ ಸಚಿವರು, ಸೈನಿಕರ ಬಗ್ಗೆ ಇಶಿತಾಗಿರುವ ಕಾಳಜಿಯನ್ನು ಶ್ಲಾಘಿಸಿದ್ದಾರೆ. ಜತೆಗೆ ಕೋವಿಡ್-19 ಸಂದರ್ಭದಲ್ಲಿ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಕಾರ್ಯವನ್ನು ಪ್ರಶಂಸಿದ್ದಾರೆ.
ಅಂಬಲಪಾಡಿ ನಿವಾಸಿ ಇಶಿತಾ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನಲ್ಲಿ ತೊಡಗಿಸಿಕೊಂಡಿದ್ದು, ರಾಜ್ಯ ಆಯುಕ್ತರ ಸೂಚನೆಯಂತೆ ಮಾಸ್ಕ್ ಹೊಲಿಯುವುದನ್ನು ಯೂಟ್ಯೂಬ್ ನೋಡಿ ಕಲಿತುಕೊಂಡಿದ್ದರು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಮಾಸ್ಕ್ ಬ್ಯಾಂಕ್‌ಗೆ ನೀಡಲು ಮುಂದಾಗಿದ್ದರೂ ಈ ವೇಳೆಗಾಗಲೇ ಅದು ಭರ್ತಿಯಾಗಿತ್ತು. ನಂತರ ಗೆಳೆಯರ ಸಲಹೆಯಂತೆ ಭಾರತೀಯ ಸೈನಿಕರಿಗೆ ಕಳುಹಿಸಲು ನಿರ್ಧರಿಸಿದ್ದು, ಆ.18ರಂದು ರಕ್ಷಣಾ ಸಚಿವರ ಹೆಸರಿಗೆ ಕೊರಿಯರ್ ಮಾಡಿದ್ದರು. ಈ ಕಾರ್ಯವನ್ನು ಶ್ಲಾಘಿಸಿ ರಾಜನಾಥ್ ಸಿಂಗ್ ಬರೆದ ಪತ್ರ ಬುಧವಾರ ಇಶಿತಾ ಕೈಸೇರಿದೆ. ಇವರ ತಂದೆ ಗಿರೀಶ್ ಆಚಾರ್ ಕತಾರ್‌ನಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಲಾಕ್‌ಡೌನ್ ಅವಧಿಯಲ್ಲಿ ತಯಾರಿಸಿದ ಮಾಸ್ಕ್‌ಗಳನ್ನು ಸೈನಿಕರಿಗೆ ನೀಡುವಂತೆ ಕೋರಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ವಿಳಾಸಕ್ಕೆ ಕೊರಿಯರ್ ಮಾಡಿದ್ದೆ. ಅನಿರೀಕ್ಷಿತವಾಗಿ ಅವರಿಂದ ಪತ್ರ ಬಂದಿದ್ದು, ತುಂಬಾ par ಸಂತೋಷವಾಗಿದೆ.
-ಇಶಿತಾ ಆಚಾರ್, ವಿದ್ಯಾರ್ಥಿನಿ, ಅಂಬಲಪಾಡಿ