ಲಾಕ್‌ಡೌನ್ ಸಡಿಲಿಕೆಯ ನಡುವೆ ಮಾಸ್ಕ್ ಧರಿಸದವರಿಗೆ ದಂಡ ವಸೂಲಿ

30-klr-8 Alternative
Published on

ಕೋಲಾರ: ಲಾಕ್‌ಡೌನ್ ಸಡಿಲಿಕೆಯ ನಡುವೆ ಮಾಸ್ಕ್ ಧರಿಸುವಿಕೆ ಕಡ್ಡಾಯಗೊಳಿಸಿದ್ದರೂ ಮಾಸ್ಕ್ ಧರಿಸದೆ ರಸ್ತೆಗೆ ಬಂದಿದ್ದ ಸಾರ್ವಜನಿಕರಿಗೆ ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್ ಶನಿವಾರ ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ.

ನಗರದ ಜೂನಿಯರ್ ಕಾಲೇಜು, ಎಂ.ಜಿ ರಸ್ತೆ ಇನ್ನಿತರೆಡೆ ಮಾಸ್ಕ್ ಹಾಕದೆ ವಾಹನಗಳಲ್ಲಿ ಸಂಚರಿಸುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಲಾಕ್‌ಡೌನ್ ನಿಯಮದ ಪಾಠ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಿಳಿಹೇಳಿ ತಲಾ 100 ರೂ. ದಂಡ ವಿದಿಸಿದ್ದು, ಒಟ್ಟು 82 ಜನರಿಂದ 8200 ರೂ ದಂಡ ವಸೂಲಿ ಮಾಡಲಾಗಿದೆ.

ಪುನರಾವರ್ತನೆಯಾದಲ್ಲಿ ದಂಡದ ಮೊತ್ತ ಹೆಚ್ಚಿಸುವ ಎಚ್ಚರಿಕೆ ನೀಡಿದರು.

ಸಾರ್ವಜನಿಕರು ತರಕಾರಿ, ದಿನಸಿ ಇನ್ನಿತರ ದಿನನಿತ್ಯದ ಅಗತ್ಯ ವಸ್ತುಗಳನ್ನು ಖರೀದಿಸಲು ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಜತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಒಂದು ತಿಂಗಳಿನಿಂದ ಜಿಲ್ಲಾಡಳಿತ ಹಾಗೂ ನಗರಸಭೆಯಿಂದ ಕರೊನಾ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ, ಇನ್ನು ಮುಂದೆ ದಂಡದ ಬಿಸಿ ಮುಟ್ಟಿಸಲಾಗುವುದು ಎಂದರು.

ನಾಗರಿಕರು ಮಾಸ್ಕ್ ಧರಿಸದೇ ರಸ್ತೆಯಲ್ಲಿ ಸುಮ್ಮನೆ ಓಡಾಟ ಮಾಡುವ ಮುನ್ನ ಯೋಚಿಸಿ, ಇಲ್ಲದಿದ್ದರೆ ನಿಮ್ಮ ಜೇಬಿಗೆ ಕತ್ತರಿ ಬೀಳಲಿದೆ ಎಂಬ ಎಚ್ಚರಿಕೆ ನೀಡಲಾಗಿದೆ. ಜನತೆ ಎಚ್ಚೆತ್ತುಕೊಳ್ಳದಿದ್ದರೆ ದಂಡದ ಪ್ರಮಾಣ ಹೆಚ್ಚಾಗಲಿದೆ. ಕೇಂದ್ರ, ರಾಜ್ಯ ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಈ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ನಗರ ಆರಕ್ಷಕ ವೃತ್ತ ನಿರೀಕ್ಷಕ ರಂಗಶಾಮಯ್ಯ, ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಎಂ.ರಂಗಸ್ವಾಮಿ, ನಗರಸಭೆ ಅಧಿಕಾರಿಗಳಾದ ಚಂದ್ರು, ತ್ಯಾಗರಾಜ್, ಬಿಲ್ ಕಲೆಕ್ಟರ್‌ಗಳಾದ ನಾರಾಯಣಸ್ವಾಮಿ, ನಟರಾಜು, ಸುಮಂತ್, ವೆಂಕಟರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net